ಸಂಜನಾ ಕೆಮಿಸ್ಟ್ರಿ

samjan
Published on

ಕಳೆದ ವರ್ಷವಷ್ಟೇ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿ, ಬಿಜಿ ಎನಿಸಿಕೊಂಡಿರುವ ನಟಿ ಸಂಜನಾ ಆನಂದ್. ಇವರು ನಾಯಕಿ ಆಗಿ ನಟಿಸಿರುವ ‘ಸಲಗ’, ‘ಕುಷ್ಕ’, ‘ಶೋಕಿವಾಲ’ ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆ ಆಗಲಿವೆ. ಅಲ್ಲದೆ ‘ಅದ್ದೂರಿ ಲವರ್’ ಹಾಗೂ ‘ಕ್ಷತ್ರಿಯ’ ಸಿನಿಮಾಗಳ ಶೂಟಿಂಗ್​ನಲ್ಲೂ ಇವರು ತೊಡಗಿಸಿಕೊಂಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಸಂಜನಾ, ಆನಂದದಿಂದಲೇ ಹಂಚಿಕೊಂಡಿರುವ ವಿಷಯಗಳ ಸಾರಾಂಶ ಇಲ್ಲಿದೆ.

ಬೆಂಗಳೂರು: ಸದ್ಯ ಕೆಲವಷ್ಟು ಸಿನಿಮಾಗಳಲ್ಲಿ ತೊಡಗಿಸಿಕೊಂಡು, ಒಂದಷ್ಟು ಸಿನಿಮಾಗಳ ಬಿಡುಗಡೆಯ ನಿರೀಕ್ಷೆಯಲ್ಲಿ ಬಿಜಿಯಾಗಿರುವ ನಟಿ ಸಂಜನಾ ಆನಂದ್​ಗೆ ಒಂದೇ ವರ್ಷದಲ್ಲಿ ಇಷ್ಟೊಂದು ಅವಕಾಶಗಳು ಸಿಕ್ಕಿರುವ ಮಿಸ್ಟ್ರಿ ಬಗ್ಗೆ ಕೇಳಿದರೆ ಅವರು ಹೇಳುವ ಮೊದಲ ಉತ್ತರ ‘ಕೆಮಿಸ್ಟ್ರಿ’.

ಹೌದು.. ಅವರ ಮೊದಲ ಸಿನಿಮಾ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಪಾತ್ರವನ್ನು ನೋಡಿಯೇ ಅವರಿಗೆ ‘ಸಲಗ’, ‘ಶೋಕಿವಾಲಾ’, ‘ಕ್ಷತ್ರಿಯ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಂತೆ.

ಅಂದಹಾಗೆ ಸ್ಯಾಂಡಲ್​ವುಡ್​ಗೆ ಅವರು ಪದಾರ್ಪಣೆ ಮಾಡಿರುವ ಹಿಂದೆ ಒಂದು ಸಣ್ಣ ಹಿಸ್ಟರಿಯೂ ಇದೆ. ‘ನಾನು ನನ್ನ ಫ್ರೆಂಡ್ ಒಬ್ಬರು ಮಾಡಿದ್ದ ಶಾರ್ಟ್ ಮೂವಿಯಲ್ಲಿ ಹಾಗೇ ಸುಮ್ಮನೆ ನಟಿಸಿದ್ದೆ. ಅದರಿಂದಾಗಿ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಅವಕಾಶ ಕೊಟ್ಟರು. ಅದೇ ಸಮಯದಲ್ಲಿ ‘ಕುಷ್ಕ’ ಸಿನಿಮಾಗೂ ಅವಕಾಶ ಬಂತು. ಆದರೆ, ಅದಿನ್ನೂ ರಿಲೀಸ್ ಆಗಬೇಕಿದೆ. ನಂತರ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದಿಂದಾಗಿ ‘ಸಲಗ’, ‘ಶೋಕಿವಾಲಾ’, ‘ಕ್ಷತ್ರಿಯ’ ಚಿತ್ರಗಳಿಗೆ ಒಟ್ಟೊಟ್ಟಿಗೆ ಅವಕಾಶ ಸಿಕ್ಕಿತು. ಬಹುಶಃ ‘ಕರಿಯಪ್ಪ’ ಸಿನಿಮಾದಲ್ಲಿ ಹೋಮ್ಲಿ ಹುಡುಗಿಯಾಗಿ ನನ್ನ ಕೆಮಿಸ್ಟ್ರಿ ಇಷ್ಟವಾಗಿ ಇವರೆಲ್ಲ ಆಫರ್ ಕೊಟ್ಟರು ಅನಿಸುತ್ತೆ’ ಎನ್ನುವ ಸಂಜನಾ, ಆ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ, ಅದೊಂಥರಾ ಮಿಸ್ಟ್ರಿ ಎನ್ನುತ್ತಾರೆ.

ಮಿಡ್ಲ್ ಕ್ಲಾಸ್ ಹುಡ್ಗಿ ಆದ್ರೂ ಬೋಲ್ಡ್ ಕ್ಯಾರೆಕ್ಟರ್: ‘ದುನಿಯಾ’ ವಿಜಯ್ ಚೊಚ್ಚಲ ನಿರ್ದೇಶನದ ಸಿನಿಮಾ ‘ಸಲಗ’ ಇದೇ ಯುಗಾದಿ ಆಸುಪಾಸಿನಲ್ಲಿ ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ. ಅದರಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಸಂಜನಾ ತಮ್ಮ ಪಾತ್ರದ ಬಗ್ಗೆ ಹೀಗೆನ್ನುತ್ತಾರೆ. ‘ನನ್ನದಿಲ್ಲಿ ಮಧ್ಯಮವರ್ಗದ ಹುಡುಗಿಯ ಪಾತ್ರವಾದರೂ ಒಂದು ರೀತಿಯಲ್ಲಿ ಬೋಲ್ಡ್ ರೋಲ್. ಬೋಲ್ಡ್ ಎಂದರೆ ಉಡುಗೆ-ತೊಡುಗೆಯಲ್ಲಲ್ಲ, ಕ್ಯಾರೆಕ್ಟರ್ ಆ ರೀತಿ ಅಷ್ಟೇ. ತುಂಬ ಧೈರ್ಯದ ಹುಡುಗಿಯಾಗಿ ನಾನಿಲ್ಲಿ ನಟಿಸಿದ್ದೇನೆ’ ಎಂದರು ಸಂಜನಾ.

ಇನ್ನು ವಿಜಿ ಅವರ ನಿರ್ದೇಶನದಲ್ಲಿ ಇದು ಮೊದಲ ಚಿತ್ರವಾದರೂ ಸಂಜನಾ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ‘ವಿಜಯ್ ಅವರು ಎಲ್ಲಿ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿದ್ದಾರೆ. ಎಲ್ಲರಿಗೂ ತುಂಬ ಸ್ಪೇಸ್ ಕೊಟ್ಟಿದ್ದರು. ಏನಾದರೂ ತಪ್ಪಾದರೆ ಹೇಳಿಕೊಡುತ್ತಿದ್ದರು. ಅವರು ಮೊದಲ ಸಲ ನಿರ್ದೇಶನ ಮಾಡುತ್ತಿರುವುದು ಅಂತ ಅನಿಸಲೇ ಇಲ್ಲ’ ಎಂಬ ಪ್ರಶಂಸೆ ಸಂಜನಾ ಅವರದು. ಅಲ್ಲದೆ ನಿರ್ವಪಕ ಕೆ.ಪಿ.ಶ್ರೀಕಾಂತ್ ಕೂಡ ಸೆಟ್​ಗೆ ಆಗಮಿಸಿ ಎಲ್ಲ ಕೇರ್ ತೆಗೆದುಕೊಳ್ಳುತ್ತಿದ್ದರು. ಅವರ ಅದ್ದೂರಿ ನಿರ್ಮಾಣ ಹಾಗೂ ವಿಜಿ ಅವರ ಚೊಚ್ಚಲ ನಿರ್ದೇಶನದ ಕಾರಣಕ್ಕೇ ಈ ಸಿನಿಮಾ ಈಗಾಗಲೇ ಒಂದು ಎಕ್ಸ್​ಪೆಕ್ಟೇಷನ್ ಮೂಡಿಸಿದೆ ಎನ್ನುತ್ತಾರೆ ‘ಸಲಗ’ದ ನಾಯಕಿ.

ಅನಿರೀಕ್ಷಿತ ಆಗಮನ: ಸಂಜನಾ ಆನಂದ್ ಸ್ಯಾಂಡಲ್​ವುಡ್​ಗೆ ಪ್ರವೇಶಿಸಬೇಕು ಎಂಬ ಕನಸು ಕಂಡವರಲ್ಲ. ಹಾಗಂತ ಆ ಆಸೆ ಇಲ್ಲದಿದ್ದವರೂ ಅಲ್ಲ. ‘ಚಂದನವನಕ್ಕೆ ಬರಬೇಕು ಎಂಬ ಆಸೆ ಇತ್ತು. ಆದರೆ, ಅದೇ ಕನಸಾಗಿರಲಿಲ್ಲ. ಎಂದಾದರೂ ಚಿತ್ರರಂಗಕ್ಕೆ ಬರುತ್ತೇನೆ ಎಂಬ ಐಡಿಯಾ ಕೂಡ ಇರಲಿಲ್ಲ. ಈಗ ಬಂದ ಮೇಲೆ ಖುಷಿ ಅನಿಸುತ್ತಿದೆ’ ಎಂಬ ಆನಂದ ಸಂಜನಾ ಅವರದು. ‘ನಾನು ಮೊದಲು ಡೆಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದೆ. ಬಾಂಡ್ ಅವಧಿ ಮುಗಿದ ಕಾರಣ ಕೆಲಸ ಬಿಡಬೇಕಾಯಿತು. ಅದೇ ಸಮಯಕ್ಕೆ ಸಿನಿಮಾ ಅವಕಾಶ ಸಿಕ್ಕಿತು. ಹೀಗಾಗಿ ಚಿತ್ರರಂಗಕ್ಕೆ ಬರುವಂತಾಯಿತು’ ಎಂದು ಅವರು ಸ್ಯಾಂಡಲ್​ವುಡ್​ಗೆ ಎಂಟ್ರಿ ಆದ ಕುರಿತು ಮತ್ತಷ್ಟು ಮಾಹಿತಿ ಹಂಚಿಕೊಂಡರು.

ಇನ್ನೂ ಹೋಗಿಲ್ಲ ಆ ಭಯ: ಪ್ರಪ್ರಥಮ ಸಲ ಕ್ಯಾಮರಾ ಎದುರಿಸುವಾಗ ಎಲ್ಲರಿಗೂ ಭಯ ಆಗುವುದು ಸಹಜ. ಕ್ರಮೇಣ ಕ್ಯಾಮರಾ ಎದುರಿಸುವ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಆ ಭಯ ನಿಧಾನವಾಗಿ ಮರೆಯಾಗುತ್ತದೆ. ಆದರೆ, ಸಂಜನಾಗೆ ಆ ಭಯ ಇನ್ನೂ ಹೋಗಿಲ್ಲವಂತೆ. ‘ಚಿತ್ರರಂಗಕ್ಕೆ ಬಂದ ಮೇಲೆ ನನಗೆ ಒಳ್ಳೊಳ್ಳೆಯ ಪಾತ್ರಗಳು ಸಿಕ್ಕಿವೆ. ಎಲ್ಲವನ್ನೂ ಕಠಿಣ ಪರಿಶ್ರಮವಹಿಸಿ ಅಭಿನಯಿಸಿದ್ದೇನೆ. ಆದರೆ ಮೊದಲ ಸಿನಿಮಾದಲ್ಲಿ ಇದ್ದ ಭಯ ಇನ್ನೂ ಮಾಯವಾಗಿಲ್ಲ. ಈಗಲೂ ಕ್ಯಾಮರಾ ಎದುರಿಸುವಾಗ ಆ ಭಯ ಇದ್ದೇ ಇರುತ್ತದೆ’ ಎನ್ನುತ್ತಾರೆ ಅವರು. ಸದ್ಯ ಒಂದರ ಹಿಂದೊಂದರಂತೆ ಮೂರ್ನಾಲ್ಕು ಸಿನಿಮಾಗಳ ಬಿಡುಗಡೆ ಇದ್ದು, ಅವುಗಳಿಗೆ ಪ್ರೇಕ್ಷಕರು ನೀಡುವ ಪ್ರತಿಕ್ರಿಯೆ ನೋಡಿ ಮುಂದೆ ಎಂಥ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿದ್ದಾರೆ ಸಂಜನಾ.

ರವಿಕಾಂತ ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net