ಸಂಗೀತಾ ಸೋಲೋ ಟ್ರಿಪ್; ವಿಯೆಟ್ನಾಂ ಸುತ್ತಿಬಂದ ‘ಚಾರ್ಲಿ’ ಸುಂದರಿ

Sangeetha
Published on

ಬೆಂಗಳೂರು: ಸದ್ಯ ‘777 ಚಾರ್ಲಿ’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿ ಸಂಗೀತಾ ಶೃಂಗೇರಿ, ಅದೇ ಖುಷಿಯಲ್ಲಿ ಸೋಲೋ ಟ್ರಿಪ್ ಹೋಗಿಬಂದಿದ್ದಾರೆ. ಆಗೊಮ್ಮೆ ಈಗೊಮ್ಮೆ ಭಾರತದಲ್ಲೇ ಸೋಲೋ ಟ್ರಿಪ್ ಹೋಗುತ್ತಿದ್ದ ಸಂಗೀತಾ ಇದೇ ಮೊದಲ ಬಾರಿಗೆ ಹೊರದೇಶಕ್ಕೆ ಹೋಗಿಬಂದಿದ್ದಾರೆ. ಅಲ್ಲಿ ಆದ ಅನುಭವಗಳನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.

‘ಚಿತ್ರೀಕರಣ, ಪ್ರಚಾರ ಅಂತ ತುಂಬ ಬಿಜಿ ಇದ್ದೆ. ಒಂದು ಬ್ರೇಕ್ ಬೇಕಿತ್ತು. ಹೀಗಾಗಿಯೇ ಸೋಲೋ ಟ್ರಿಪ್ ಪ್ಲಾ್ಯನ್ ಮಾಡಿಕೊಂಡು ವಿಯೆಟ್ನಾಂಗೆ ಹೊರಟೆ. ಸುಮಾರು ಏಳು ದಿನಗಳ ಕಾಲ ವಿಯೆಟ್ನಾಂ ಸುತ್ತಿದೆ’ ಎಂದು ತಮ್ಮ ಸೋಲೋ ಟ್ರಿಪ್ ಬಗ್ಗೆ ಹೇಳಿಕೊಳ್ಳುತ್ತಾರೆ ನಟಿ ಸಂಗೀತಾ. ಅವರಿಗೆ ಅಲ್ಲಿ ತುಂಬ ಜನ ಭಾರತೀಯರು ಸಿಕ್ಕಿದ್ದರಂತೆ. ‘ನನ್ನಂತೆಯೇ ಫೀಮೇಲ್ ಟ್ರಾವೆಲರ್ಸ್ ಜಾಸ್ತಿ ಜನ ಸಿಕ್ಕಿದರು’ ಎಂದು ಹೇಳುವ ಸಂಗೀತಾಗೆ ಅಲ್ಲಿ ಊಟದ ಸಮಸ್ಯೆ ಹೆಚ್ಚಾಗಿ ಕಾಡಿತಂತೆ. ‘ಊಟದ ಸಮಸ್ಯೆ ಜಾಸ್ತಿ ಆಯ್ತು. ನಾನು ಖಾರ ಜಾಸ್ತಿ ತಿನ್ನುತ್ತೇನೆ. ವಿಯೆಟ್ನಾಂ ಜನ ಖಾರ ತಿನ್ನೋದೇ ಇಲ್ಲ. ಭಾರತೀಯರು ವಿಶ್ವದೆಲ್ಲೆಡೆ ಹರಡಿಕೊಂಡಿದ್ದಾರೆ. ವಿಯೆಟ್ನಾಂನಲ್ಲೂ ಇದ್ದಾರೆ. ಹೀಗಾಗಿಯೇ ಅಲ್ಲೂ ಇಂಡಿಯನ್ ರೆಸ್ಟೋರೆಂಟ್ ಇದೆ. ಅಲ್ಲಿಗೆ ತೆರಳಿ ಅಡುಗೆಯವರಿಗೆ ನಾನೇ ಹೇಳಿ ಹೆಚ್ಚು ಖಾರ ಹಾಕಿಸಿ ಆಲೂ ಪರಾಟ ಮಾಡಿಸಿಕೊಂಡು ತಿಂದೆ. ಎಲ್ಲಿಗೇ ಹೋದರೂ ನಮಗೇ ನಮ್ಮ ದೇಶನೇ ಉತ್ತಮ ಅನ್ನಿಸುತ್ತೆ. ನನಗಂತೂ ಬೆಂಗಳೂರಿಗೆ ಯಾವಾಗ ವಾಪಸ್ ಬರ್ತೀನೋ ಅಂತನಿಸುತ್ತಿತ್ತು. ಇನ್ನು ಮುಂದೆ ಸೋಲೋ ಟ್ರಿಪ್​ಗೆ ಮೆಣಸಿನಕಾಯಿ ಬಾಕ್ಸ್, ಪುಳಿಯೊಗರೆ ಮಿಕ್ಸ್ ತಗೊಂಡು ಹೋಗ್ತೀನಿ’ ಎಂದು ನಗುತ್ತಾರೆ ಸಂಗೀತಾ.

ವಿಯೆಟ್ನಾಂನಲ್ಲಿದ್ದಾರೆ ಚಾಲಾಕಿ ಕಳ್ಳರು!: ಇನ್ನು ತಮ್ಮ ಮೊದಲ ಒಂಟಿ ವಿದೇಶ ಪ್ರವಾಸದಲ್ಲೇ ಸಂಗೀತಾ ಹಣ ಕಳೆದುಕೊಂಡಿದ್ದಾರೆ. ಕಳ್ಳತನದ ಬಗ್ಗೆ ಹೇಳುವ ಅವರು, ‘ವಿಯೆಟ್ನಾಂ ಜನ ತುಂಬ ಫ್ರೆಂಡ್ಲಿ, ನಗರಗಳೂ ಹಸಿರಿನಿಂದ ಕೂಡಿವೆ. ಆದರೆ, ಕಳ್ಳರಿಂದ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಪರ್ಸ್​ನಲ್ಲಿದ್ದ 400 ಅಮೆರಿಕನ್ ಡಾಲರ್ (31,678 ರೂ.) ತೆಗೆದುಕೊಂಡು, ಅದನ್ನು ಮತ್ತೆ ಬ್ಯಾಗ್​ನಲ್ಲಿಟ್ಟಿದ್ದರು. ಭಾಷೆ ಗೊತ್ತಿಲ್ಲದ ಕಾರಣ ಪೊಲೀಸರಿಗೆ ದೂರು ನೀಡಲು ಹೋಗಲಿಲ್ಲ. ನನಗೆ ಪರಿಚಯವಾದ ಹಲವು ಮಂದಿ ಭಾರತೀಯರೂ ಇದೇ ರೀತಿ ಕಳ್ಳತನವಾದ ಕುರಿತು ನನ್ನ ಬಳಿ ಹೇಳಿದರು’ ಎಂದು ಅನುಭವ ಬಿಚ್ಚಿಟ್ಟರು ಸಂಗೀತಾ ಶೃಂಗೇರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net