

ಬೆಂಗಳೂರು: ಈ ಮೊದಲೇ ಎರಡು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ನಟಿ ಸಂಗೀತಾ ಶೃಂಗೇರಿ ಬತ್ತಳಿಕೆಗೆ ಈಗ ಮತ್ತೊಂದು ಸಿನಿಮಾ ಸೇರ್ಪಡೆಗೊಂಡಿದೆ. ಘೋಷಣೆ ಆಗಿರುವ ‘100 ಮಂಕೀಸ್’ ಚಿತ್ರದಲ್ಲಿ ನಾಯಕಿಯಾಗಿ ಸಂಗೀತಾ ಆಯ್ಕೆಯಾಗಿದ್ದಾರೆ.
ಈ ಚಿತ್ರದಲ್ಲಿ ಅವರು ಪ್ರಮೋದ್ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದು, ಸದ್ಯದಲ್ಲೇ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ. ‘ಈಗಾಗಲೇ ಸಿನಿಮಾದ ಚಿತ್ರಕಥೆ ಕೆಲಸ ಬಹುತೇಕ ಮುಗಿದಿದೆ. ಇತ್ತ ನಮ್ಮ ಚಿತ್ರದ ಕಲಾವಿದರು ಹಲವು ಸಿನಿಮಾಗಳ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಅವರ ಡೇಟ್ಸ್ ಸಿಗುತ್ತಿದ್ದಂತೆ ನಮ್ಮ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಲಿದ್ದೇವೆ. ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ನಲ್ಲಿ ಶೂಟಿಂಗ್ ಶುರುವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ ಚಿತ್ರದ ನಿರ್ದೇಶಕ ಯಶಸ್ವಿ ಬಾಲಾದಿತ್ಯ. ಇನ್ನು ಈ ಚಿತ್ರದಲ್ಲಿ ಸಂಗೀತಾ ನಿಭಾಯಿಸುತ್ತಿರುವ ಪಾತ್ರವೂ ಅಷ್ಟೇ ವಿಶೇಷವಾಗಿದೆಯಂತೆ. ಇಲ್ಲಿ ಅವರು ಸಸ್ಯಶಾಸ್ತ್ರಜ್ಞರಾಗಿ, ಸಸಿಗಳ ಪಾಲನೆ ಮತ್ತು ಪೋಷಣೆ ಮಾಡುವ ಹುಡುಗಿಯಾಗಿದ್ದಾರೆ.
‘ಒಂದೊಂದು ಸಿನಿಮಾದಲ್ಲಿ ಒಂದೊಂದು ವಿಭಿನ್ನವಾದ ಪಾತ್ರಗಳು ಸಿಗುತ್ತಿವೆ. ಇದೀಗ ‘100 ಮಂಕೀಸ್’ ಚಿತ್ರದಲ್ಲಿ ಗಿಡಮರಗಳ ಪ್ರೇಮಿಯಾಗಿ ಕಾಣಿಸಿಕೊಂಡಿದ್ದೇನೆ. ಕಾಮಿಡಿ, ಸಸ್ಪೆನ್ಸ್ ಶೈಲಿಯ ಸಿನಿಮಾದಲ್ಲಿ ನನಗೆ ಪ್ರಮೋದ್ ಜೋಡಿಯಾಗಿದ್ದಾರೆ’ ಎನ್ನುತ್ತಾರವರು. ಈ ಸಿನಿಮಾದ ಜತೆಗೆ ‘ಮಾರಿಗೋಲ್ಡ್’, ‘ಚಾರ್ಲಿ’ ಸಿನಿಮಾದ ಶೂಟಿಂಗ್ನಲ್ಲಿಯೂ ಸಂಗೀತಾ ಭಾಗವಹಿಸಲಿದ್ದಾರೆ. ಈ ಎರಡು ಚಿತ್ರಗಳು ಮುಗಿಯುತ್ತಿದ್ದಂತೆ ‘100 ಮಂಕೀಸ್’ ಸೆಟ್ಗೆ ತೆರಳಲಿದ್ದಾರೆ. ‘100 ಮಂಕೀಸ್’ ಚಿತ್ರದಲ್ಲಿ ಮೂರು ಹಾಡುಗಳಿವೆ. ಭೀಷ್ಮನ್ ಮೊದಲ ಬಾರಿ ಪೂರ್ಣ ಪ್ರಮಾಣದ ಕ್ಯಾಮರಾಮನ್ ಆಗಿ ಈ ಚಿತ್ರಕ್ಕೆ ಕೆಲಸ ಮಾಡಲಿದ್ದಾರೆ.