'ಕರಿ ಹೈದ ಕರಿ ಅಜ್ಜ' ಮುಕ್ತಾಯ; ಗುಳಿಗನ ಪಾತ್ರದಲ್ಲಿ ಬಾಲಿವುಡ್​ ನೃತ್ಯ ನಿರ್ದೇಶಕ

Kari Haida - Kari Ajja 3
Published on

ಬೆಂಗಳೂರು: ಕಳೆದ ತಿಂಗಳಷ್ಟೇ ಪತ್ರಿಕಾಗೋಷ್ಠಿ ಮಾಡಿ 'ಕರಿ ಹೈದ ಕರಿ ಅಜ್ಜ' ಎಂಬ ಚಿತ್ರ ಮಾಡುತ್ತಿರುವುದಾಗಿ ನಿರ್ದೇಶಕ ಸುಧೀರ್​ ಅತ್ತಾವರ್​ ಹೇಳಿಕೊಂಡಿದ್ದರು. ಈ ಚಿತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಭಾರತೀಯ ನಟ ಕಬೀರ್​ ಬೇಡಿ ನಟಿಸುತ್ತಿರುವ ವಿಷಯವನ್ನು ಅವರು ಹೇಳಿದ್ದರು. ಈಗ ಆ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ.

ಹೌದು, ತ್ರಿವಿಕ್ರಮ ಸಪಲ್ಯ ನಿರ್ಮಾಣದ 'ಕರಿ ಹೈದ ಕರಿ ಅಜ್ಜ' ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಪವಾಡ ಪುರುಷ ಕೊರಗಜ್ಜ ಜೀವನಾಧಾರಿತ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಬರುವ ಮುಖ್ಯ ಪಾತ್ರವೊಂದಲ್ಲಿ ಹಾಲಿವುಡ್, ಬಾಲಿವುಡ್ ಹಾಗೂ ಫ್ರೆಂಚ್ ಸಿನಿಮಾಗಳ ನೃತ್ಯ ನಿರ್ದೇಶಕ, ಡ್ಯಾನ್ಸರ್, ನಟ ಸಂದೀಪ್ ಸೋಪರ್ಕರ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇವರು ಕೊರಗಜ್ಜನ ಜೊತೆ ಬರುವ ಗುಳಿಗನ ಪಾತ್ರ ನಿರ್ವಹಿಸಿದ್ದಾರೆ. ಅಂತರರಾಷ್ಟ್ರೀಯ ಈ ಕಲಾವಿದ ಇದೇ ಮೊದಲಬಾರಿಗೆ ಕನ್ನಡ ಸಿನಿಮಾವೊಂದರಲ್ಲಿ ನಟಿಸಿರುವುದು ವಿಶೇಷ.

ಈ ಚಿತ್ರದ ಬಗ್ಗೆ ಮಾತನಾಡುವ ಸುಧೀರ್​, 'ನಿನ್ನೆಯಷ್ಟೇ ಕೊರಗಜ್ಜ ಕೋಲು ಕೊಡುವ ಮೂಲಕ 'ಕರಿ ಹೈದ ಕರಿ ಅಜ್ಜ' ಚಿತ್ರದ ಶೂಟಿಂಗ್ ಮುಗಿಸಲಾಯಿತು. ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಪವಾಡಗಳು ನಡೆದಿದ್ದು, ಎಲ್ಲರ ಅನುಭಕ್ಕೆ ಬಂದಿದೆ. ಇದು ಕೊರಗಜ್ಜ ಎಂದು ಕರೆಯುವ 22-23 ವರ್ಷ ಬದುಕಿದ್ದ ಹುಡುಗನ ಕಥೆ. ಇದರಲ್ಲಿ ಸಂದೀಪ್ ಸೋಪರ್ಕರ್ ಗುಳಿಗನ ಪಾತ್ರ ಮಾಡಿದ್ದಾರೆ. ಇದು ಕೊರಗಜ್ಜನ ಜೊತೆಗೆ ಸಾಗುತ್ತದೆ. ಗುಳಿಗನ ಪಾತ್ರವನ್ನು ನೃತ್ಯದ ಹಿನ್ನೆಲೆಯಲ್ಲಿ ತೋರಿಸಲಾಗಿದ್ದು, ಆ ಪಾತ್ರಕ್ಕೆ ಸಂದೀಪ್ ಅವರು ಸೂಕ್ತರಾಗಿದ್ದಾರೆ. ಭೈರಕ್ಕಿ ಪಾತ್ರ ಮುಖ್ಯವಾಗಿದ್ದು, ಭೈರಕ್ಕಿ ಕೊರಗಜ್ಜನ ಸಾಕು ತಾಯಿ. ಈ ಪಾತ್ರವನ್ನು ನಟಿ ಶ್ರುತಿ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಕೊರಗಜ್ಜನ ನೈಜ ಕಥೆ ಹೇಳಲಾಗಿದ್ದು, ಕಥೆಯನ್ನು ಕೊರಗ ಜನಾಂಗದಿಂದ ಸಂಗ್ರಹಿಸಿ ಸಿನಿಮಾ ಮಾಡಲಾಗಿದೆ' ಎಂದು ಹೇಳಿದರು.

ನಂತರ ಮಾತನಾಡಿದ ಹಾಲಿವುಡ್ ನಟ ಸಂದೀಪ್ ಸೋಪರ್ಕರ್, 'ನಾನು ಮಾಡಿರುವ ಪಾತ್ರ ಅದ್ಭುತವಾಗಿದ್ದು ಹೊಸ ರೀತಿಯಲ್ಲಿ ಅನುಭವ ನೀಡಿತು. ಈ ಪಾತ್ರವನ್ನು ನಾನು ನನ್ನ ಸಹೋದರಿಯರ ಜತೆಗೆ ರೀಸರ್ಚ್ ಮಾಡಿ ಮಾಡಿದ್ದೇನೆ. ಇದರಲ್ಲಿ ನಾನು ಡ್ಯಾನ್ಸ್ ಜೊತೆ ನಟನೆ ಕೂಡ ಮಾಡಿದ್ದೇನೆ. ಶೂಟಿಂಗ್ ಮಾಡುವ ಸಂದರ್ಭದಲ್ಲಿ ಸಾಕಷ್ಟು ಜನ ಗಲಾಟೆ ಮಾಡಿ ಎರಡು ದಿನ ಶೂಟಿಂಗ್ ನಿಂತಿತ್ತು. ನಂತರ ನಿರ್ದೇಶಕ, ನಿರ್ಮಾಪಕರು ಕಷ್ಟಪಟ್ಟು ಶೂಟಿಂಗ್ ಮಾಡಿಸಿದರು. ಮೊದಲ ಬಾರಿಗೆ ಜಾನಪದ ಶೈಲಿಯಲ್ಲಿ ಡ್ಯಾನ್ಸ್ ಮಾಡಿದ್ದು ಶಿವನ ನೃತ್ಯ ಅನುಭವ ಮರೆಯಲಾಗದು' ಎಂದರು.

ಕೊರಗಜ್ಜನ ಸಾಕು ತಾಯಿ ಪಾತ್ರ ನಿರ್ವಹಿಸಿರುವ ನಟಿ ಶ್ರುತಿ ಮಾತನಾಡಿ, 'ಈ ಸಿನಿಮಾ ನನ್ನ ಮನಸ್ಸಿನಲ್ಲಿ ವಿಷೇಷವಾದ ಸ್ಥಾನ ಪಡೆಯುತ್ತದೆ. ನಾನಿಲ್ಲಿ ಭೈರಕ್ಕಿ ಪಾತ್ರ ಮಾಡಿದ್ದೇನೆ. ನನ್ನ ಪಾತ್ರಕ್ಕೆ ಎರಡು ಶೇಡ್​ ಇದೆ. ನಾನು ಕಳ್ಳಬಟ್ಟಿ ಮಾರುತ್ತಿರುತ್ತೇನೆ. ಇದರಲ್ಲಿ ತಾಯಿ-ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ' ಎಂದರು.

'ಕರಿ ಹೈದ ಕರಿ ಅಜ್ಜ' ಚಿತ್ರದಲ್ಲಿ ನಾಯಕನಾಗಿ ಭರತ್ ಸೂರ್ಯ ನಟನೆ ಮಾಡಿದ್ದು, ಅವರು ಸಿನಿಮಾ ಶೂಟಿಂಗ್ ಮುಗಿಯುವ ವರೇಗೆ ಕಾಲಿಗೆ ಚಪ್ಪಲಿ ಹಾಕಿಲ್ಲವಂತೆ. ಇನ್ನು, ನಾಯಕಿಯಾಗಿ ವೃತಿಕಾ ಅಭಿನಯಿಸಿದ್ದಾರೆ. ಚಿತ್ರವನ್ನು ಏಕಕಾಲದಲ್ಲಿ ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಿಸಲಾಗುತ್ತಿದೆ. ಧ್ರತಿ ಕ್ರಿಯೇಷನ್ಸ್ ಹಾಗೂ ಸಕ್ಸಸ್ ಫಿಲಂಸ್ ಬ್ಯಾನರ್ ನಲ್ಲಿ ಈ ನಿರ್ಮಾಣ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net