ಲ್ಯಾಂಡ್‌ಲಾರ್ಡ್ ನಿರ್ದೇಶಕನ ಜತೆ ದೊಡ್ಮನೆ ಯುವರಾಜ : ಯುವ ಮೂರನೇ ಚಿತ್ರಕ್ಕೆ ಜಡೇಶ್ ಕೆ. ಹಂಪಿ ನಿರ್ದೇಶನ, ತರುಣ್ ಸುಧೀರ್ ನಿರ್ಮಾಣ

ಯುವ 03 ಚಿತ್ರತಂಡ
ಯುವ 03 ಚಿತ್ರತಂಡ
Published on

ಪ್ರಮುಖ ಮುಖ್ಯಾಂಶಗಳು

  • ನಟ ಯುವರಾಜಕುಮಾರ್ ಮೂರನೇ ಚಿತ್ರ ಘೋಷಣೆ, 14ಕ್ಕೆ ಮುಹೂರ್ತ
  • ಜಡೇಶ್ ಹಂಪಿ ನಿರ್ದೇಶನ, ಫ್ಯಾಮಿಲಿ ಡ್ರಾಮಾದಲ್ಲಿ ಯುವ ನಟ
  • ಚಿತ್ರದಲ್ಲಿ ಗುರುಶಿಷ್ಯರು ಕಥೆಯ ಛಾಯೆ ಇದೆ ಎಂದ ನಿರ್ದೇಶಕ ಜಡೇಶ್​
ಬೆಂಗಳೂರು : ‘ದೊಡ್ಮನೆ’ ಕುಡಿ ಯುವರಾಜಕುಮಾರ್ ಅಭಿನಯದ ಮೂರನೇ ಸಿನಿಮಾ ಘೋಷಣೆಯಾಗಿದೆ. ‘ಯುವ’ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದ ಅವರು ಬಳಿಕ ‘ಎಕ್ಕ’ ಮೂಲಕ ಸದ್ದು ಮಾಡಿದ್ದರು. ಆ ನಂತರ ಮೂರನೇ ಸಿನಿಮಾ ಯಾವುದು ಎಂಬ ಮಾಹಿತಿ ಇರಲಿಲ್ಲ. ‘ದುನಿಯಾ’ ಸೂರಿ ನಿರ್ದೇಶನದ ‘ಕಾಗೆ ಬಂಗಾರ’ದಲ್ಲಿ ಯುವ ಇರಲಿದ್ದಾರೆ ಎನ್ನಲಾಗಿತ್ತಾದರೂ, ಆದರೆ, ಇದೀಗ ಆ ಚಿತ್ರಕ್ಕೆ ಬೇರೊಬ್ಬ ನಟನ ಹೆಸರು ಕೇಳಿಬರುತ್ತಿದೆ. ಹೀಗಿರುವಾಗಲೇ ಯುವರಾಜಕುಮಾರ್ ಅಭಿನಯದ ಮೂರನೇ ಸಿನಿಮಾ ಘೋಷಣೆಯಾಗಿದ್ದು, ಇದೇ 14ರಂದು ಅಧಿಕೃತ ಚಾಲನೆ ದೊರೆಯಲಿದೆ. ‘ಯುವ 03’ಗೆ ನಿರ್ದೇಶಕ ಜಡೇಶ್ ಹಂಪಿ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಹಿಂದೆ ‘ಜೆಂಟಲ್‌ಮ್ಯಾನ್’, ‘ಗುರುಶಿಷ್ಯರು’, ‘ಲ್ಯಾಂಡ್‌ಲಾರ್ಡ್’ನಂತಹ ಸಾಮಾಜಿಕ ಹಾಗೂ ವಿಷಯಾಧಾರಿತ ಸಿನಿಮಾಗಳನ್ನು ನಿರ್ದೇಶಿಸಿ, ಜತೆಗೆ ಹಿಟ್ ‘ಕಾಟೇರ’ ಕಥೆಗಾರನಾಗಿರಯೂ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ಜವಾರಿ ನಿರ್ದೇಶಕ ಜಡೇಶ್ ಇದೀಗ ‘ದೊಡ್ಮನೆ ಕುಡಿ’ಗೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಜವಾಬ್ದಾರಿ ಹೆಚ್ಚಿಸಿಕೊಂಡಿದ್ದಾರೆ. ಯುವ ಮತ್ತು ಜಡೇಶ್ ಕಾಂಬಿನೇಷನ್ ಚಿತ್ರಕ್ಕೆ ನಿರ್ದೇಶಕ ತರುಣ್ ಸುಧೀರ್ ಹಾಗೂ ‘ಭೀಮ’ ನಿರ್ಮಾಪಕ ಜಗದೀಶ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಈ ನಾಲ್ವರ ಕಾಂಬಿನೇಷನ್‌ನಿಂದಾಗಿಯೇ ಸ್ಯಾಂಡಲ್‌ವುಡ್‌ನಲ್ಲಿ ‘ಯುವ 03’ ಕುರಿತಂತೆ ನಿರೀಕ್ಷೆ ಹೆಚ್ಚಿದೆ. ಚಿತ್ರದ ಬಗ್ಗೆ ಜಡೇಶ್, ‘ಈ ಚಿತ್ರದಲ್ಲಿ ‘ಗುರುಶಿಷ್ಯರು’ ಛಾಯೆ ಕಾಣಬಹುದಾದರೂ, ನನ್ನ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾದ ಜಾನರ್ ಚೇಂಜ್ ಮಾಡಿದ್ದೇನೆ. ಈ ಬಾರಿ ಮನರಂಜನೆ ಜತೆಗೆ ಕೌಟುಂಬಿಕ ಹಿನ್ನೆಲೆಯ ಕಥೆ ಹೇಳುತ್ತಿದ್ದೇನೆ. ಎಲ್ಲ ವಯೋಮಾನದವರೂ ಕುಳಿತು ನೋಡುವ ಸಿನಿಮಾ ಇದಾಗಲಿದೆ. ಈ ಕಥೆಯಲ್ಲಿ ಮೋಟಿವೇಷನ್ ಇರಲಿದೆ. ಕಥೆ, ಜಾನರ್ ಹಾಗೂ ಇನ್ನಷ್ಟು ವಿಷಯಗಳನ್ನು ಇದೇ 14ರಂದು ಮುಹೂರ್ತದ ಸಮಯಲ್ಲಿ ಹಂಚಿಕೊಳ್ಳುವೆ’ ಎಂದು ಮಾಹಿತಿ ನೀಡುತ್ತಾರೆ.
"

‘ಗುರುಶಿಷ್ಯರು’, ‘ಕಾಟೇರ’, ‘ಲ್ಯಾಂಡ್‌ಲಾರ್ಡ್’ನಂತೆ ಇದು ಅಂದಿನ ಕಥೆಯಲ್ಲ. ಬದಲಾಗಿ ಇಂದಿನ ಅರ್ಥಾತ್ 2026ರ ಕಥೆ. ಇಂದಿನ ಜನರೇಷನ್ ಕಥೆ ಎಂದರೆ, ನಾಯಕ ಕೂಡ ಯೂತ್ ಆ್ಯಂಡ್ ಎನರ್ಜಿಟಿಕ್ ಆಗಿ ಇರಬೇಕು. ಆ ಎನರ್ಜಿ ಹಾಗೂ ಫೋರ್ಸ್ ಯುವ ಅವರಲ್ಲಿದೆ. ಅಲ್ಲದೇ ನಮ್ಮ ಕಥೆಗೆ, ಸೃಷ್ಟಿಸಿರುವ ಪಾತ್ರಕ್ಕೆ ಅವರು ಹೊಂದುತ್ತಾರೆ. ಹಾಗಾಗಿ, ಅವರನ್ನು ಆಯ್ಕೆ ಮಾಡಿಕೊಂಡೆವು. ಜತೆಗೆ ಯುವಗೂ ಕಥೆ ಇಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net