1920, 1947, 1967... ಹೀಗೆ ಮೂರು ಕಾಲಘಟ್ಟಗಳಲ್ಲಿ ನಡೆಯುವ ಕಥೆಯಿದು. ಹೀಗಾಗಿ ಯಶ್ ಮೂರ್ನಾಲ್ಕು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಾರಂಭವಾದ 40 ನಿಮಿಷಗಳಲ್ಲಿ ನಾಲ್ಕು ಹೊಡೆದಾಟಗಳು ಸೇರಿ ಮೊದರ್ಲಧ 8, 9 ಬಾರಿ ರಕ್ತಪಾತ ನಡೆಯುತ್ತದೆ. ಇಲ್ಲಿ ಯಾರೂ ಹೀರೋಗಳಲ್ಲ. ಎಲ್ಲರೂ ವಿಲನ್ಗಳೇ! ಅಪ್ಪ ಮಗನನ್ನ, ಹೆಂಡತಿ ಗಂಡನನ್ನ, ಅಕ್ಕ ತಮ್ಮನ್ನ, ವಧು - ವರನನ್ನು... ಹೀಗೆ ಮಕ್ಕಳು, ಹೆಂಗಸರು, ಮುದುಕರು ಎಂಬ ಬೇಧಭಾವವಿಲ್ಲದಂತೆ ಎಲ್ಲರ ಕ್ರೌರ್ಯದ ಕರಾಳ ಮುಖಗಳ ಅನಾವರಣವಾಗುತ್ತದೆ. ಹೀಗಾಗಿ ಸ್ವಲ್ಪ ಓವರ್ ದ ಟಾಪ್ ಅಂತನ್ನಿಸಬಹುದು. ಆದರೆ, ದ್ವೀತಿಯಾರ್ಧ ಸಿನಿಮಾ ಇನ್ನೊಂದು ಹಾದಿ ಹಿಡಿಯುತ್ತದೆ. ಅಲ್ಲಿ ಆ್ಯಕ್ಷನ್ ಜತೆಜತೆಗೆ ಭಾವನೆಗಳ ಮೇಲಾಟ ನಡೆಯುತ್ತದೆ. ಮೊದಲರ್ಧ ಹೊಡೆದಾಟವಿದ್ದರೆ, ದ್ವೀತಿಯಾರ್ಧ ತೊಳಲಾಟವಿದೆ. ಎರಡೂ ವಿಷಯಗಳಲ್ಲಿ ಯಶ್ ಮಿಂಚಿದ್ದಾರೆ. ರಾಯ, ಟಿಕೆಟ್ ಆಗಿ ಒಬ್ಬರೇ ಇಡೀ ಚಿತ್ರವನ್ನು ಹೊತ್ತು ಸಾಗಿದ್ದಾರೆ. ಅವರಿಗೆ ಅಲ್ಲಲ್ಲಿ ನಯನತಾರಾ, ಕಿಯಾರಾ, ರುಕ್ಮಿಣಿ ಸ್ವಲ್ಪ ದೂರ ಕೈಬದಲಾಯಿಸಿದ್ದಾರೆ. ಹಾಲಿವುಡ್ ಮೇಕಿಂಗ್ ಇರುವ ಭಾರತೀಯ ಚಿತ್ರವಿದು. ಹೀಗಾಗಿ ಕೆಲವೊಮ್ಮೆ ಕನ್ನಡಕ್ಕೆ ಡಬ್ ಆದ ಇಂಗ್ಲೀಷ್ ಚಿತ್ರವನ್ನು ನೋಡುತ್ತಿರುವ ಫೀಲ್ ನೀಡಿದರೂ ಆಶ್ಚರ್ಯವಿಲ್ಲ. ಅಷ್ಟರ ಮಟ್ಟಿಗಿದೆ ಮೇ"ಕಿಂಗ್! ಜತೆಗೆ ಪ್ರತಿಯೊಬ್ಬ ಕಲಾವಿದರ ಪರ್ಫಾಮೆನ್ಸ್ ಕೂಡ ಇಷ್ಟವಾಗುತ್ತದೆ. ಅದರಲ್ಲೂ ಯಶ್ ಹೆಸರಿಗೆ ತಕ್ಕಂತೆ ರಾ"ಕಿಂಗ್'! ಹಾಲಿವುಡ್ ಶೈಲಿಯ ಚಿತ್ರದ ಮೂಲಕ ಭಾರತದ ಎಮೋಷನಲ್ ಫೇರಿಟೇಲ್ಅನ್ನು ಪ್ರೇಕ್ಷಕರ ಮುಂದಿಡುವ ನಿರ್ದೇಶಕಿ ಗೀತು ಮೋಹನದಾಸ್ ಸಾಹಸವನ್ನು ಮೆಚ್ಚಲೇಬೇಕು. ರವಿ ಬಸ್ರೂರ್ ಹಿನ್ನೆಲೆ ಸಂಗೀತ, ಸಂಭಾಷಣೆಕಾರ ರಾವ್ ವಿನಯ್ ಒನ್ಲೈನರ್ಗಳು, ರಾಜೀವ್ ರವಿ ಛಾಯಾಗ್ರಹಣ "ಟಾಕ್ಸಿಕ್' ಅದ್ದೂರಿತನ ಹೆಚ್ಚಿಸಿವೆ. ಇನ್ನು 194 ನಿಮಿಷಗಳ ಸುದೀರ್ಘ ಸಿನಿಮಾದಲ್ಲಿ ಕೆಲ ಫೈಟ್ಗಳ ಜತೆಗೆ ಒಂದಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕುವ ಅವಕಾಶವಿತ್ತು. ಚಿತ್ರಕಥೆಯನ್ನು ಇನ್ನಷ್ಟು ಗಟ್ಟಿ ಮಾಡಬಹುದಿತ್ತು. ಅದೇನೇ ಇರಲಿ, ಕನ್ನಡ ನೆಲದಿಂದ ಪ್ಯಾನ್ ವರ್ಲ್ಡ್ ಹೊರಟಿರುವ ಯಶ್ ಸಾಹಸಕ್ಕೆ ಬೆನ್ನು ತಟ್ಟಲು, ಇದುವರೆಗಿನ ಅವರ ಬೆಸ್ಟ್ ಪರ್ಫಾಮೆನ್ಸ್ಗೆ ಸಾಕ್ಷಿಯಾಗಲು, ಹಾಲಿವುಡ್ ಶೈಲಿಯ ಕನ್ನಡ ಸಿನಿಮಾ ಕಣ್ತುಂಬಿಕೊಳ್ಳಲು ಇಷ್ಟಪಡುವವರಿಗೆ "ಟಾಕ್ಸಿಕ್' ಮೋಸ ಮಾಡುವುದಿಲ್ಲ.