25 ವರ್ಷಗಳ ಬಳಿಕ ಮತ್ತೊಮ್ಮೆ ರಿಲೀಸ್ ಆಗುತ್ತಿದೆ ‘ಯಜಮಾನ’

yajamaana movie poster
yajamaana movie poster
Published on

ಪ್ರಮುಖ ಮುಖ್ಯಾಂಶಗಳು

  • ಯಜಮಾನ’ ಸಿನಿಮಾವು 2000ರ ಡಿ.1ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ, ಸಹೋದರ ವಾತ್ಸಲ್ಯ ಸಾರುವ ಈ ಕುಟುಂಬ ಪ್ರಧಾನ ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು
  • ತಾಂತ್ರಿಕವಾಗಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಕಲರಿಂಗ್ ಹಾಗೂ ಸೌಂಡ್ ಎಫೆಕ್ಟ್ ನವೀಕರಣಗೊಂಡು ಹೊಸದಾಗಿ, ಇಂದಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರವನ್ನು ತೆರೆ ಮೇಲೆ ತರಲಾಗುತ್ತಿದೆ
  • ಶುಕ್ರವಾರ (ನ. 7) 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿ-ರಿಲೀಸ್ ಆಗುತ್ತಿದೆ
ಬೆಂಗಳೂರು: ಕನ್ನಡ ಚಲನಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿರುವ ಚಿತ್ರಗಳಲ್ಲಿ ಡಾ. ವಿಷ್ಣುವರ್ಧನ್ ಅಭಿನಯದ ‘ಯಜಮಾನ’ ಕೂಡ ಒಂದು. ಸಿನಿಮಾ 2000ರ ಡಿ.1ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಸಹೋದರ ವಾತ್ಸಲ್ಯ ಸಾರುವ ಈ ಕುಟುಂಬ ಪ್ರಧಾನ ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಕಥೆಯಿಂದ ಸ್ಫೂರ್ತಿಗೊಂಡು ಅನೇಕರು ಜೀವನದಲ್ಲಿ ಬದಲಾವಣೆ ಕಂಡಿದ್ದರು. ಅಲ್ಲದೇ ಹಲವು ಚಿತ್ರಮಂದಿರಗಳಲ್ಲಿ ಒಂದು ವರ್ಷ ಕಾಲ ಪ್ರದರ್ಶನ ಕಂಡಿತ್ತು. ಇಂತಹ ಸ್ಫೂರ್ತಿದಾಯಕ ಚಿತ್ರ ಇದೀಗ ಮತ್ತೆ ತೆರೆಗೆ ಬರುತ್ತಿದೆ.
ಡಾ. ವಿಷ್ಣುವರ್ಧನ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ಚಿತ್ರವನ್ನು ಮರುಬಿಡುಗಡೆ ಮಾಡಲಾಗತ್ತಿದ್ದು, ಶುಕ್ರವಾರ (ನ. 7) 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿ-ರಿಲೀಸ್ ಆಗುತ್ತಿದೆ. ತಾಂತ್ರಿಕವಾಗಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಕಲರಿಂಗ್ ಹಾಗೂ ಸೌಂಡ್ ಎಫೆಕ್ಟ್ ನವೀಕರಣಗೊಂಡು ಹೊಸದಾಗಿ, ಇಂದಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರವನ್ನು ತೆರೆ ಮೇಲೆ ತರಲಾಗುತ್ತಿದೆ.
ನಟ ಶಶಿಕುಮಾರ್, ‘‘ಯಜಮಾನ’ ಐತಿಹಾಸಿಕ ದಾಖಲೆ ನಿರ್ಮಿಸಿರುವ ಚಿತ್ರ. ಈ ಚಿತ್ರದ ದಾಖಲೆಯನ್ನು ಇಂದಿಗೂ ಯಾವ ಸಿನಿಮಾಗಳೂ ಮುರಿಯಲು ಅಸಾಧ್ಯ. ಸಂಸದನಾಗಿರುವಾಗಲೇ ಈ ಚಿತ್ರದ ಭಾಗವಾಗಿದ್ದು ನನಗೆ ಖುಷಿಯ ವಿಚಾರ. ವಿಷ್ಣುವರ್ಧನ್ ಸರ್ ನನಗೆ ಅಣ್ಣನಿದ್ದಂತೆ. ಅವರ ಅನೇಕ ಸಿನಿಮಾಗಳಲ್ಲಿ ನಾನು ನಟಿಸಿದ್ದೇನೆ. ‘ಯಜಮಾನ’ ರಿ-ರಿಲೀಸ್ ಆಗುತ್ತಿರುವುದು ಅವಿಸ್ಮರಣೀಯ’ ಎಂದು ಸಂತಸ ಹಂಚಿಕೊಂಡರು. ವಿತರಕ ಮುನಿಸ್ವಾಮಿ, ‘ಈಗಾಗಲೇ 100ಕ್ಕೂ ಅಧಿಕ ಥಿಯೇಟರ್‌ಗಳು ಮುಂಗಡ ಬುಕಿಂಗ್ ಆಗಿವೆ. ಕಲರಿಂಗ್ ಹಾಗೂ ಸೌಂಡಿಂಗ್ ನವೀಕರಿಸಲಾಗಿದೆ’ ಎಂದರು.
ಆರ್. ಶೇಷಾದ್ರಿ-ರಾಧಾ ಭಾರತಿ ನಿರ್ದೇಶಿಸಿದ್ದ ‘ಯಜಮಾನ’ ಚಿತ್ರದಲ್ಲಿ ವಿಷ್ಣುವರ್ಧನ್ ದ್ವಿಪಾತ್ರದಲ್ಲಿದ್ದರು. ಅವರ ಜತೆಗೆ ಅಭಿಜಿತ್, ಶಶಿಕುಮಾರ್, ರಮೇಶ್ ಭಟ್, ಪ್ರೇಮಾ ಕಲಾಬಳಗದಲ್ಲಿದ್ದರು. ರಾಜೇಶ್ ರಾಮನಾಥ್ ಸಂಗೀತ, ರಮೇಶ್ ಬಾಬು ಛಾಯಾಗ್ರಹಣ ಚಿತ್ರಕ್ಕಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net