actor shridhar: ಮಾತೃಭಾಷೆ ಇಲ್ಲವಾದರೆ, ಯಾಂತ್ರಿಕರಾಗುತ್ತೇವೆ

ನಟ ಶ್ರೀಧರ್
ನಟ ಶ್ರೀಧರ್
Published on

ಪ್ರಮುಖ ಮುಖ್ಯಾಂಶಗಳು

  • ಭಾಷೆಯ ಇತಿಹಾಸದಿಂದ ನಾವು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತೇವೆ
  • ಜೀವನದ ಯೋಗ ಧರ್ಮವನ್ನು ಕಟ್ಟಿಕೊಟ್ಟವರು ಡಿವಿಜಿ
  • ಕದಂಬರ ಕಾಲದಿಂದ ಕನ್ನಡದ ಅಸ್ತಿತ್ವ ಆರಂಭ
ಅತ್ಯಂತ ಭವ್ಯವಾದ ಇತಿಹಾಸ, ಸಂಸ್ಕೃತಿಯ ನಾಡು ನಮ್ಮದು. ಕನ್ನಡ ಎಂದರೆ ಕೇವಲ ಶಬ್ದ, ಮಾತು ಅಷ್ಟೇ ಅಲ್ಲ. ಅದಕ್ಕೂ ಮೀರಿದ ಜೀವನ ವಿಧಾನ. ಕನ್ನಡ ಕಲಿಯುವ, ಮಾತನಾಡುವ ಮೂಲಕ ನಾವು ದೊಡ್ಡ ಸಂಸ್ಕೃತಿಯ ಸೌಧವನ್ನು ನಿರ್ಮಿಸುತ್ತಿದ್ದೇವೆ. ಯಾವ ಭಾಷೆಯನ್ನು ಕಲಿಯುತ್ತಿದ್ದೇವೆಯೋ, ಬಳಸಿ ಜ್ಞಾನವನ್ನು ಪಡೆಯುತ್ತಿದ್ದೇವೆಯೋ ಆ ಭಾಷೆಯ ಇತಿಹಾಸದಿಂದ ನಾವು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತೇವೆ. ದೇಶದಲ್ಲಿ ಅದೆಷ್ಟೋ ಭಾಷೆಗಳಿವೆ. ಆ ಎಲ್ಲ ಭಾಷೆಗಳು ಭಾರತೀಯ ಸಂಸ್ಕೃತಿಯನ್ನು ಪ್ರಚುರಪಡಿಸುತ್ತವೆ. ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಕನ್ನಡ ನಮಗೆ ತಾಯಿಯಾದರೆ, ಕನ್ನಡಮ್ಮಳ ತಾಯಿ ಭಾರತ ಮಾತೆ. ಕದಂಬರ ಕಾಲದಿಂದ ಕನ್ನಡದ ಅಸ್ತಿತ್ವ ಆರಂಭವಾಯಿತು. ಪಂಪ ಆದಿಕವಿ. ಬಳಿಕ ರನ್ನ, ಪೊನ್ನ, ಜನ್ನ, ಲಕ್ಷ್ಮೀಶ, ಕುಮಾರವ್ಯಾಸ ಸೇರಿ ಅನೇಕ ಪ್ರಾಚೀನ ಕವಿಗಳು ಕನ್ನಡವನ್ನು ಸಾಹಿತ್ಯಿಕವಾಗಿ ಶ್ರೀಮಂತಗೊಳಿಸಿದರು. ಶರಣರ ವಚನಗಳು, ದಾಸರ ತತ್ವಗಳು ಭಕ್ತಿ ಹಾಗೂ ಜ್ಞಾನದ ಗಂಗೆಯನ್ನು ಹರಿಸಿವೆ. ರಾಷ್ಟ್ರಕವಿ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ದಿವ್ಯತೆಯನ್ನು ಪರಿಚಯಿಸಿಕೊಡುತ್ತದೆ. ಸರಳವಾಗಿ ಅತ್ಯಂತ ಗಹನವಾದ ವಿಚಾರಗಳನ್ನು ಹೇಳಿದವರು ಬೇಂದ್ರೆ. ಜೀವನದ ಯೋಗ ಧರ್ಮವನ್ನು ಕಟ್ಟಿಕೊಟ್ಟವರು ಡಿವಿಜಿ. ಇನ್ನು ಪುತಿನ, ಅನಕೃ, ತರಾಸು, ಕೆ.ಎಸ್.ನರಸಿಂಹಸ್ವಾಮಿ ಸೇರಿ ಅನೇಕರು ಜ್ಞಾನ ಪ್ರವಾಹವನ್ನು ಹರಿಸಿದ್ದಾರೆ. ಗೋಪಾಲಕೃಷ್ಣ ಅಡಿಗರು, ಶಿವರಾಮ ಕಾರಂತ, ತೀನಂಶ್ರೀ, ವಿ.ಸೀತಾರಾಮಯ್ಯ, ಎಸ್.ಎಲ್. ಭೈರಪ್ಪ ಹೀಗೆ ಅವರ ಸಾಹಿತ್ಯ ಎಷ್ಟು ಅಭಿರುಚಿಯೋ ಹಾಗೆಯೇ ಅವರ ಬದುಕು ಕೂಡ ಮಾದರಿಯಾದುದು. ಈ ಎಲ್ಲ ಸಾಧಕರು ನಡೆ-ನುಡಿ ಒಂದೇ ಎಂಬಂತೆ ಬಾಳಿದವರು. ಇಷ್ಟು ಜನರಲ್ಲಿ ಒಬ್ಬರನ್ನೇ ಅನುಸರಿಸಿದರೆ ಸಾಕು ನಮ್ಮ ಜೀವನ ಸಾರ್ಥಕವಾಗುತ್ತದೆ.
ಇಂದಿನ ಶಿಕ್ಷಣದಲ್ಲಿ ಮೌಲ್ಯಗಳು ಇಲ್ಲದಂತಾಗಿದೆ. ಪಾಶ್ಚಿಮಾತ್ಯ ಶಿಕ್ಷಣದ ಪ್ರಭಾವದಿಂದಾಗಿ ನಮ್ಮ ಸೊಗಡು, ಸಂಸ್ಕೃತಿ, ಜೀವನದ ಜೀವಾಳವನ್ನು ಕಳೆದುಕೊಳ್ಳುತ್ತಿದ್ದೇವೆ. ಅದಕ್ಕಾಗಿ ಪ್ರತಿ ದಿನ ಸ್ವಲ್ಪ ಸಮಯವಾದರೂ ಕನ್ನಡ ಓದಬೇಕು. ಕನ್ನಡ ಮಹಾನ್ ವ್ಯಕ್ತಿಗಳ ಪರಿಚಯ ಮಾಡಿಕೊಳ್ಳುತ್ತಿರಬೇಕು. ವಚನಗಳು, ಕಗ್ಗಗಳು, ಕನ್ನಡ ನುಡಿಗಟ್ಟುಗಳು ಕೇವಲ ಪರೀಕ್ಷೆಗೆ ಅಂಕ ತರುವ ವಿಷಯ ವಸ್ತುಗಳಾಗದೆ ದೈನಂದಿನ ಪಠಣವಾಗಬೇಕು. ಪಠ್ಯಚಟುವಟಿಕೆಯಲ್ಲಿ ಭೌತ, ರಾಸಾಯನಿಕ ಹಾಗೂ ಗಣಿತಶಾಸಗಳು ಹೇಗೆ ಮುಖ್ಯವಾಗುತ್ತವೆಯೋ ಹಾಗೆಯೇ ಕನ್ನಡ ನಮಗೆ ಮೊದಲ ಆದ್ಯತೆಯಾಗಬೇಕು. ಮೊದಲು ಕನ್ನಡ ಉಳಿದ ವಿಷಯಗಳು ಆಯ್ಕೆಯಾಗಬೇಕು. ಮಾತೃಭಾಷೆ ಕಲಿತಷ್ಟು ಬುದ್ಧಿಶಕ್ತಿ ಚುರುಕಾಗಿ, ಹೃದಯ ಅರಳುತ್ತದೆ. ಮಾತೃಭಾಷೆ ಇಲ್ಲವಾದರೆ, ನಾವು ಯಾಂತ್ರಿಕರಾಗಿಬಿಡುತ್ತೇವೆ. ಅದಕ್ಕಾಗಿ ಕನ್ನಡ ಬದುಕಿನ ಮಾಧ್ಯಮವಾಗಲಿ. ವೈಯಕ್ತಿಕವಾಗಿ ಕನ್ನಡ ಭಾಷೆ ನನಗೆ ಕೊಟ್ಟ ಆನಂದ, ಜ್ಞಾನವನ್ನು ಸದಾ ಸ್ಮರಿಸುತ್ತೇನೆ.
ಶ್ರೀಧರ್, ಹಿರಿಯ ನಟ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net