‘ಹನುಮಾನ್’ಗೆ ಜೈ ಎಂದ ವಮಿಕಾ : ರಿಷಬ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರತಂಡ ಸೇರಿದ ಬಾಲಿವುಡ್ ನಟಿ

ವಮಿಕಾ ಗಬ್ಬಿ
ವಮಿಕಾ ಗಬ್ಬಿ
Published on

ಪ್ರಮುಖ ಮುಖ್ಯಾಂಶಗಳು

  • ತಮಿಳಿನ ಡಿಸಿ ಸಿನಿಮಾ ಗೆದ್ದ ಖುಷಿಯಲ್ಲಿ ನಟಿ ವಮಿಕಾ ಗಬ್ಬಿ
  • ತೆಲುಗಿನ ಜೈ ಹನುಮಾನ್​ ಚಿತ್ರಕ್ಕೆ ಆಯ್ಕೆಯಾದ ನಟಿ
  • ಪಾತ್ರದ ಬಗ್ಗೆ ಗೌಪ್ಯತೆ ಕಾಪಾಡಲಾಗಿದ್ದು, ಸದ್ಯದಲ್ಲೇ ತಂಡ ಸೇರಲಿರುವ ನಟಿ

‘ಕಾಂತಾರ ಅಧ್ಯಾಯ 1’ರ ಬಳಿಕ ನಟ ರಿಷಬ್ ಶೆಟ್ಟಿ ತೆಲುಗಿನ ‘ಜೈ ಹನುಮಾನ್’, ಹಿಂದಿಯ ‘ಛತ್ರಪತಿ ಶಿವಾಜಿ ಮಹಾರಾಜ್: ದ ಪ್ರೈಡ್ ಆ್ ಭಾರತ್’ ಚಿತ್ರಗಳಲ್ಲಿ ನಟಿಸುತ್ತಿರುವ ವಿಚಾರ ಗೊತ್ತೇ ಇದೆ. ಸದ್ಯ ಅವರು ‘ಜೈ ಹನುಮಾನ್’ ಶೂಟಿಂಗ್‌ಗಾಗಿ ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿದ್ದಾರೆ. ‘ಹನು-ಮ್ಯಾನ್’ ಖ್ಯಾತಿಯ ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಗಂಗಾವತಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಮುಹೂರ್ತ ಕಂಡಿತ್ತು. ಇದೀಗ ಹೈದರಾಬಾದ್‌ನಲ್ಲಿ ಭರ್ಜರಿಯಾಗಿ ಶೂಟಿಂಗ್ ನಡೆಯುತ್ತಿದೆ. ಹೀಗಿರುವಾಗಲೇ ಚಿತ್ರಕ್ಕೆ ಬಾಲಿವುಡ್ ನಟಿ ವಮಿಕಾ ಗಬ್ಬಿ ಸೇರ್ಪಡೆಯಾಗಿದ್ದಾರೆ. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಮಿಕಾ ಕಳೆದ ವರ್ಷ ತೆರೆಕಂಡಿದ್ದ ‘ಭೂಲ್ ಚುಕ್ ಮಾಫ್​’ ಮೂಲಕ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಯಶಸ್ಸು ವಮಿಕಾ ಅದೃಷ್ಟವನ್ನೇ ಬದಲಾಯಿಸಿದ್ದು, ಇದೀಗ ಅವರು ಹಿಂದಿ ಸೇರಿ ಪರಭಾಷೆಗಳಲ್ಲೂ ಬಿಜಿಯಾಗಿದ್ದಾರೆ. ಕಳೆದ 7ರಂದು ರಿಲೀಸ್ ಆದ ತಮಿಳಿನ ‘ಡಿಸಿ’ ಯಶಸ್ಸಿನ ಖುಷಿಯಲ್ಲಿರುವಾಗಲೇ ‘ಜೈ ಹನುಮಾನ್’ಗೆ ಅವರು ಆಯ್ಕೆಯಾಗಿದ್ದು, ಸಿನಿಮಾದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಚಿತ್ರತಂಡ ಸೇರಿರುವ ಬಗ್ಗೆ ವಮಿಕಾ ಕೂಡ ಖಚಿತಪಡಿಸಿದ್ದು, ಪಾತ್ರದ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಕೆಲ ದಿನಗಳಲ್ಲಿಯೇ ವಮಿಕಾ ಶೂಟಿಂಗ್‌ಗೆ ಹೈದರಾಬಾದ್‌ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

2026 ವಮಿಕಾಗೆ ಗೋಲ್ಡನ್ ಇಯರ್

ಬಾಲಿವುಡ್ ನಟಿ ವಮಿಕಾ ಗಬ್ಬಿಗೆ 2026 ಗೋಲ್ಡನ್ ವರ್ಷವಾಗಿದೆ. ಈಗಾಗಲೇ ಈ ವರ್ಷದ ಮೊದಲರ್ಧದಲ್ಲಿ ಅವರ ಹಿಂದಿಯ ‘ಭೂತ್ ಬಂಗ್ಲಾ’, ‘ಪತಿ ಪತ್ನಿ ಜೌರ್ ವೋ ದೋ’ ಹಾಗೂ ತಮಿಳಿನ ‘ಡಿಸಿ’ ರಿಲೀಸ್ ಆಗಿವೆ. ಇನ್ನು ಉಳಿದ ಐದು ತಿಂಗಳಲ್ಲಿ ನಟಿಯ ಐದು ಸಿನಿಮಾಗಳು ರಿಲೀಸ್ ಆಗುತ್ತಿರುವುದು ವಿಶೇಷ. ಹಿಂದಿಯ ‘ಪ್ರಹಾರ್: ದ ಉಜ್ವಲ್ ನಿಕ್ಕಂ ಸ್ಟೋರಿ’, ‘ಕುಕು ಕೀ ಕುಂಡ್ಲಿ’, ತೆಲುಗಿನ ‘ಜಿ2’, ಮಲಯಾಳಂನ ‘ಟಿಕಿ ಟಕಾ’, ತಮಿಳಿನ ‘ಜೆನಿ’ ಶೂಟಿಂಗ್ ಮುಗಿಸಿದ್ದು ಇದೇ ವರ್ಷ ಬಿಡುಗಡೆಯಾಗಲಿವೆ. ಇನ್ನು ಪಂಜಾಬಿ ಸಿನಿಮಾ ‘ಕಿಕ್ಲಿ’, ತಮಿಳಿನ ‘ಇರವಕಾಲಂ’ ಹಾಗೂ ಹಿಂದಿಯ ‘ದಿಲ್ ಕಾ ದರ್ವಾಜಾ ಖೋಲ್ ನಾ ಡಾರ್ಲಿಂಗ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆಯೇ ಅವರು ‘ಜೈ ಹನುಮಾನ್’ ಚಿತ್ರಕ್ಕೆ ಸಹಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net