ಬೆಂಗಳೂರು: ನಾಡಿನ ಸಂಸ್ಕೃತಿ ಪಸರಿಸುವ ವೀರಗಾಸೆ ಕಲೆ ಮತ್ತು ವೀರಭದ್ರ ದೇವರ ಇತಿಹಾಸ ಸಾರುವ ಚಿತ್ರವೇ ‘ರುದ್ರಾಭಿಷೇಕಂ’. ಈ ಚಿತ್ರಕ್ಕೆ ವಸಂತ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ನಟ ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿದ್ದು, ಅವರು ದ್ವಿಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಇಲ್ಲಿ ವಿಜಯ್‌ಗೆ ‘ಬಿಗ್‌ಬಾಸ್ ಕನ್ನಡ ಸೀಸನ್ 8’ರ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ -ಪ್ರೊಡಕ್ಷನ್ ಕಾರ್ಯಗಳು ಆರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನೆರವೇರಿತು. ‘ಪ್ರೇಕ್ಷಕರು ‘ರುದ್ರಾಭಿಷೇಕಂ’ ಚಿತ್ರದ ಕಥೆಯ ಅಂಶವನ್ನು ನೋಡಿ ತುಂಬಾ ವರ್ಷಗಳಾಗಿದೆ. ಹಾಗಾಗಿ, ಇದು ಹೊಸದು ಅನಿಸುತ್ತದೆ. ಕಥೆಯ ಬಗ್ಗೆ ನಿರ್ಮಾಪಕರಿಗೆ ನಂಬಿಕೆ, ನಿರ್ದೇಶಕರಿಗೆ ಭರವಸೆಯಿದ್ದಾಗ ವಾತಾವರಣ ತಿಳಿಯಾಗಿರುತ್ತದೆ. ಹಾಗಾಗಿ, ಕಲಾವಿದರಿಗೆ ಕೆಲಸ ಮಾಡಲು ಹಗುರ ಅನಿಸುತ್ತದೆ. ಇಡೀ ಕಥೆಯು ಶಿವಮಯವಾಗಿದೆ. ವೀರಗಾಸೆ ಪಾತ್ರ ಮಾಡುವುದು ತುಂಬಾ ಸವಾಲಾಗಿತ್ತು. ಅದನ್ನು ನಾನು ಅನುಭವಿಸಿದ್ದೇನೆ. ಪೌರಾಣಿಕ ಹಾಗೂ ಆಧುನಿಕ ಎರಡು ಕಾಲದಲ್ಲಿ ನಡೆಯುವ ಕಥೆ ಇದಾಗಿದೆ. ಇಲ್ಲಿನ ನಾನು ತಂದೆ, ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ವಿಜಯ್ ರಾಘವೇಂದ್ರ ಮಾಹಿತಿ ನೀಡಿದರು. ನಟಿ ಪ್ರಿಯಾಂಕಾ ತಿಮ್ಮೇಶ್, ‘ಈ ಚಿತ್ರ ಒಪ್ಪಲು 3 ಕಾರಣವಿದೆ. ಚಿತ್ರದಲ್ಲಿ ಶಿವನ ಭಕ್ತೆಯಾಗಿದ್ದೇನೆ. ಅಷ್ಟೇ ಅಲ್ಲದೇ ನಟನೆಗೆ ಹೆಚ್ಚು ಅವಕಾಶ ಸಿಕ್ಕಿದೆ. ನಾನು ಕೂಡ ಎರಡು ಶೇಡ್‌ನಲ್ಲಿದ್ದೇನೆ. ಒಂದೇ ಸಿನಿಮಾದಲ್ಲಿ ನನ್ನನ್ನು ಎರಡು ರೀತಿಯಾಗಿ ನೋಡಬಹುದಾಗಿದೆ’ ಎಂದು ಖುಷಿ ಹಂಚಿಕೊಂಡರು.