Shrimathi Sindhoora Review - ಶ್ರೀಮತಿಯ ಸಿಂಧೂರ ಉಳಿಸಲು ಹೀಗೊಂದು ಆಪರೇಷನ್​!

Shrimathi Sindhoora Review
Shrimathi Sindhoora Review
Published on
Shrimathi Sindhoora Review -
ಚಿತ್ರ: ಶ್ರೀಮತಿ ಸಿಂಧೂರ
ನಿರ್ದೇಶನ: ಅನಂತರಾಜು
ತಾರಾಗಣ: ವಿಜಯ್​ ರಾಘವೇಂದ್ರ, ಪ್ರಿಯಾ ಹೆಗಡೆ, ಮಾನಸಿ ಸುಧೀರ್​, ಪ್ರಸನ್ನ, ಗಣೇಶ್​ ರಾವ್​, ಹಿತೇಶ್​ ಮತ್ತಿತರರು
ಆತ ಭರತ (ವಿಜಯ್​). ನೂರಾರು ಜನರಿಗೆ ಸಹಾಯ ಮಾಡಿದ ಶ್ರೀಮಂತ ಮನೆತನದ ಯುವಕ. ಅಮೆರಿಕದಲ್ಲಿ ಕೆಲಸ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಭರತನಿಗೆ ತಾಯಿ ಅನ್ನಪೂರ್ಣ (ಮಾನಸಿ) ಜತೆಗಿರುತ್ತಾನೆ. ಭಾವ ತೀರಿಕೊಂಡರು ಅಂತ ತಂಗಿಯನ್ನು ಸಂತೈಸಲು ಬರುವ ಮಾವ (ಗಣೇಶ್​), ತನ್ನ ಮಗಳ ಜತೆ ಅಲ್ಲೇ ಸೆಟಲ್​ ಆಗಿರುತ್ತಾನೆ. ಮಗಳಿಗೂ, ಭರತನಿಗೂ ಮದುವೆ ಮಾಡಿಸಿದರೆ, ಇಡೀ ಆಸ್ತಿ ನನ್ನ ಕೈ ಸೇರುತ್ತೆ ಎಂಬ ದೂ(ದು)ರಾಲೋಚನೆ ಆತನದು. ಅದರ ನಡುವೆಯೇ ಗೆಳೆಯನ ತಂಗಿಯ ಮದುವೆಗೆಂದು ಭರತ ಊರಿಗೆ ಮರಳುತ್ತಾನೆ. ಮದುವೆ ಮನೆಯಲ್ಲಿ ನಡೆಯುವ ಕೆಲ ಟನೆಗಳಿಂದಾಗಿ, ಹಸೆಮಣೆ ಏರಿದ್ದ ಗೆಳೆಯನ ತಂಗಿ ಇಂದೂ (ಪ್ರಿಯಾ), ಭರತನ ಮನೆ ಸೇರತ್ತಾಳೆ. ಹೊಸ ಸೊಸೆಯನ್ನು ಅಮ್ಮ ಒಪ್ಪಿದರೂ, ಮಾವ ಒಪ್ಪಲ್ಲ. ಹೇಗಾದರೂ ಮಾಡಿ ಇಂದೂ, ಭರತರನ್ನು ದೂರ ಮಾಡಿ, ತನ್ನ ಮಗಳ ಜತೆ ಮದುವೆ ಮಾಡಿಸಲೇಬೇಕು ಅಂತ ಮಾವ ಕತ್ತಿ ಮಸೆಯುತ್ತಿರುತ್ತಾನೆ. ಲೋಕಲ್​ ಡಾನ್​ (ಪ್ರಸನ್ನ) ಸಹಾಯ ಪಡೆದು ಪ್ಲಾ$್ಯನ್​ ಮಾಡಿ, ಅದರಲ್ಲಿ ಸಕ್ಸಸ್​ ಕೂಡ ಆಗುತ್ತಾನೆ. ಹೇಗೆ? ಮುಂದೇನಾಗುತ್ತೆ? "ಶ್ರೀಮತಿ ಸಿಂಧೂರ' ನೋಡಿ.
ಈಗ್ಗೆ ಎರಡು, ಮೂರು ದಶಕಗಳ ಹಿಂದೆ ಬಂದಿದ್ದರೆ "ಶ್ರೀಮತಿ ಸಿಂಧೂರ' ಸೂಪರ್​ಹಿಟ್​ ಸಿನಿಮಾ. ಆದರೆ, ಈಗಿನ ಒಟಿಟಿ, ವೆಬ್​ಸರಣಿ ಮತ್ತು ವಿಶ್ವದ ಮೂಲೆ ಮೂಲೆಗಳ ಕಂಟೆಂಟ್​ಗೆ ತೆರೆದುಕೊಂಡಿರುವ ಪ್ರೇಕ್ಷಕರಿಗೆ ಕಥೆ ಔಟ್​ಡೇಟೆಡ್​ ಅನ್ನಿಸಬಹುದು. ಪುರಾಣ, ಆಧ್ಯಾತ್ಮ, ಭಕ್ತಿ, ಸ್ವಲ್ಪ ಫ್ಯಾಂಟಸಿ, ಪ್ರೀತಿ, ಗೆಳೆತನ, ಸೇಡು, ಆ್ಯಕ್ಷನ್​, ನಂಬಿಕೆ, ಅನುಮಾನ, ಕೃತಜ್ಞತೆ, ಕೃತಘ್ನತೆ, ಎಮೋಷನ್ಸ್​... ಹೀಗೆ ಎಲ್ಲ ಅಂಶಗಳೂ ಚಿತ್ರದಲ್ಲಿವೆ. ಅನಿರೀಕ್ಷಿತವಾಗಿ ಇಣುಕು ಹಾಕುವ ಹಾಡುಗಳು ಮನಸ್ಸಿನಲ್ಲಿ ಉಳಿಯುವುದಿಲ್ಲ. ನಿಧಾನವಾಗಿ ಸಾಗುವ 151 ನಿಮಿಷಗಳ ಸಿನಿಮಾ ಸುದೀರ್ಘ ಅಂತನ್ನಿಸಿದರೂ ಆಶ್ಚರ್ಯವಿಲ್ಲ. ಆದರೂ, ವಿಜಯ್​ ರಾಘವೇಂದ್ರ, ಪ್ರಿಯಾ, ಗಣೇಶ್​, ಮಾನಸಿ, ಪ್ರಸನ್ನ ನಟನೆ ಚಿತ್ರವನ್ನು ನೋಡಿಸಿಕೊಳ್ಳುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net