ಪಕ್ಯಾ ಅಲಿಯಾಸ್ ಪ್ರಕಾಶ್ ಬಿಜಾಪುರ (ಪೃಥ್ವಿ). ಗೋಲ್‌ಗುಂಬಜ್‌ನಲ್ಲಿ ಟೂರ್ ಗೈಡ್ ಮತ್ತು ಆಟೋ ಡ್ರೈವರ್ ಆಗಿ ಕೆಲಸ ಮಾಡುವಾತ. ಪಿಸ್ತೂಲ್ ಶಬ್ಧ ಕೇಳಿದರೆ ಸಾಕು ಗಢಗಢ ನಡುಗುವ ಅಂಜುಬುರಕ. ಅಂತಹ ಪಕ್ಯಾ ರಾಜಸ್ಥಾನದ ಮರಳುಗಾಡಿನಲ್ಲಿ ಸುಂದರಿಯೊಬ್ಬಳಿಗೆ ಮುತ್ತಿಡುವ ಕನಸು ಕಾಣುತ್ತಾನೆ. ಕನಸಿನಲ್ಲಿ ಕಂಡ ಹುಡುಗಿ ಎರಡನೇ ದಿನವೇ ಆತನಿಗೆ ಎದುರಾಗುತ್ತಾಳೆ. ಆಕೆಯೇ ಪಿಂಕಿ ಪಾಟೀಲ್ (ಹೃತಿಕಾ). ಒಣ ಮೆಣಸಿನಕಾಯಿಯಷ್ಟೇ ಖಾರದ ಹುಡುಗಿ. ಅಂತಹ ಪಿಂಕಿ ಹಿಂದೆ ಪಕ್ಯಾ ಬೀಳುತ್ತಾನೆ. ಓದದಿದ್ದರೂ ಫೇಕ್ ಸರ್ಟೀಫಿಕೆಟ್ ಮಾಡಿಸಿ, ಆಕೆಯ ಕಾಲೇಜು ಸೇರುತ್ತಾನೆ. ಅದೊಂದು ದಿನ ಕಾಲೇಜಿನಲ್ಲಿ ರ‌್ಯಾಗಿಂಗ್ ಮಾಡುವ ಸೀನಿಯರ್ಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಪಿಂಕಿ, ಪಕ್ಯಾನ ಸಹಾಯ ಕೇಳಿ, ಪಿಸ್ತೂಲ್ ತಂದು ಕೊಡಲು ವಿನಂತಿಸುತ್ತಾಳೆ. ಅಂತೆಯೇ ಪ್ರಕಾಶ್, ಬಿಜಾಪುರದ ಡಾನ್ ಮಾರ್ತಾಂಡ ಸಾಠೇ (ಬಲರಾಜವಾಡಿ) ಗನ್ ಫ್ಯಾಕ್ಟರಿಯಿಂದ ಪಿಸ್ತೂಲ್ ಕದ್ದು ಪಿಂಕಿಗೆ ತಂದುಕೊಡುತ್ತಾನೆ. ಬಳಿಕ ಇಬ್ಬರೂ ಮುಸುಕುಧಾರಿಯಾಗಿ ಸೀನಿಯರ್‌ಗಳನ್ನು ಎದುರಿಸುತ್ತಾರೆ. ಅದನ್ನೇ ಪಪ್ಯಾ (ವಾದಿರಾಜ್) ವಿಡಿಯೋ ಮಾಡಿ, ಪಕ್ಯಾ ಮತ್ತು ಪಿಂಕಿಯನ್ನು ಬೆದರಿಸುತ್ತಾನೆ. ಈ ಸಮಸ್ಯೆ ಪರಿಹರಿಸಿಕೊಳ್ಳಲು ಹೋಗಿ ಇಬ್ಬರೂ ಮತ್ತೊಂದು ಪಜೀತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಅದೇನು ಅಂತ ತಿಳಿಯಬೇಕಾದರೆ, ‘ಉಡಾಳ’ ಸಿನಿಮಾ ನೋಡಬೇಕಷ್ಟೇ.