ಬೆಂಗಳೂರು: ವಿದ್ಯಾವಾಚಸ್ಪತಿ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ ಸಿನಿಮಾವೊಂದು ಕನ್ನಡದಲ್ಲಿ ಬರಲು ಸಿದ್ಧವಾಗಿದೆ. ‘ಜೀರ್ಜಿಂಬೆ’ ನಿರ್ದೇಶಕ ಕಾರ್ತಿಕ್ ಸರಗೂರು ಈ ಬಯೋಪಿಕ್‌ಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಗೋವಿಂದಾಚಾರ್ಯರ ಬಾಲ್ಯ, ಯೌವನ, ವೈಚಾರಿಕ ವಿಚಾರಗಳ ಸಂಘರ್ಷ, ನಾಸ್ತಿಕತೆಯ ಭಾವ ಹಾಗೂ ಸಂಶೋಧನೆ ವಿಚಾರಗಳನ್ನಿಟ್ಟುಕೊಂಡು ಮುಂದೆ ಹೇಗೆ ಅವರು ವಿದ್ವಾಂಸರಾದರು ಎಂಬುದನ್ನು ಈ ಕಟ್ಟಿಕೊಡಲಾಗುತ್ತಿದೆ. ಬನ್ನಂಜೆ ಆಚಾರ್ಯರಾಗಿ ನಟ ಭಾಸ್ಕರ್ ರಾವ್ ಅಭಿನಯಿಸಿದ್ದಾರೆ. ಕೃಷ್ಣರಾಜ್ ಕುತ್ಪಾಡಿ, ಲೀಲಾಕೃಷ್ಣ, ರಾಘವ, ಋತುಪರ್ಣ, ಸ್ನೇಹಾ ಹೆಗಡೆ, ರಘು ಬೀರೂರು, ಸುಮಾ ಶಾಸ್ತ್ರಿ, ರೋಹಿತ್ ಆಚಾರ್ ಕಲಾಬಳಗದಲ್ಲಿದ್ದಾರೆ. ‘ಈ ಸಿನಿಮಾವನ್ನು ಬಯೋಪಿಕ್‌ಗೆ ಸೀಮಿತಗೊಳಿಸಬಾರದು. ಬನ್ನಂಜೆ ಅವರ ಅಂತರಂಗ, ಜ್ಞಾನಸಾಗರವನ್ನು, ಪ್ರಶ್ನಿಸುವ ಮನೋಭಾವದ ಬದುಕನ್ನು ಕಟ್ಟಿಕೊಡುವ ಪ್ರಯತ್ನವಾಗಿದೆ. ಸನಾತನ ಸಂಸ್ಕೃತಿಯ ಸಂಪ್ರದಾಯಗಳ ಅಂತರಾರ್ಥವನ್ನು ತಿಳಿದು ಆಚರಿಸಬೇಕು ಎಂಬುದು ಆಚಾರ್ಯರ ನಿಲುವಾಗಿತ್ತು’ ಎಂದು ಚಿತ್ರತಂಡ ಹೇಳಿಕೊಂಡಿದೆ. ಬನ್ನಂಜೆಯವರ ಪುತ್ರಿ ವೀಣಾ ಬನ್ನಂಜೆ ಹಾಗೂ ನರಸಿಂಹಚಾರ್ ಈ ಜೀವನಾಗಾಥೆ ತೆರೆ ಮೇಲೆ ತರಲು ನೆರವಾಗಿದ್ದಾರೆ. ಉಡುಪಿ, ಮಣಿಪಾಲ ಸೇರಿ ವಿವಿಧೆಡೆ ಚಿತ್ರೀಕರಣ ಪೂರ್ಣಗೊಳಿಸಲಾಗಿದ್ದು, ಶೀಘ್ರವೇ ಸಿನಿಮಾ ಬಿಡುಗಡೆಯಾಗಲಿದೆ. ಪ್ರವೀಣ್ ರಾವ್ ಸಂಗೀತ, ಬಿ.ಆರ್.ವಿಶ್ವನಾಥ ಛಾಯಾಗ್ರಹಣ ಚಿತ್ರಕ್ಕಿದೆ.