ನಟ ವಿಜಯ್ ಸೇತುಪಥಿ ಅಭಿನಯದ ‘ಮಹಾರಾಜ’ ಚಿತ್ರ ತಮಿಳು ಚಿತ್ರರಂಗದಲ್ಲಿಯೇ ಇತಿಹಾಸ ನಿರ್ಮಿಸಲು ಮುಂದಾಗಿದೆ. 2024ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿತ್ತು. ಕೇವಲ 20 ಕೋಟಿಯಲ್ಲಿ ನಿರ್ಮಾಣವಾಗಿ, 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿಕೊಂಡಿತ್ತು. ಹಾಗೆಯೇ, ಚೀನಾದಲ್ಲಿಯೂ ರಿಲೀಸ್ ಆಗಿ ಹಿಟ್ ಎನಿಸಿಕೊಂಡಿತ್ತು. ಅದರ ಬೆನ್ನಲ್ಲೇ ಬಾಲಿವುಡ್ ನಟ ಆಮಿರ್ ಖಾನ್ ಹಿಂದಿಯಲ್ಲಿ ರಿಮೇಕ್ ಮಾಡಲು ಮುಂದಾಗಿದ್ದು, ಇದೀಗ ‘ಮಹಾರಾಜ’ ಹಾಲಿವುಡ್‌ಗೂ ರಿಮೇಕ್ ಆಗುತ್ತಿದೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯು ರಿಮೇಕ್ ಹಕ್ಕು ಖರೀದಿಸಿರುವುದನ್ನು ‘ಮಹಾರಾಜ’ ನಿರ್ಮಾಪಕ ಸುಧನ್ ಸುಂದರಮ್ ಖಚಿತಪಡಿಸಿದ್ದಾರೆ. ಇದು ಕಾಲಿವುಡ್ ಮಟ್ಟಿಗೆ ಐತಿಹಾಸಿಕ ಕ್ಷಣವಾಗಿದ್ದು, ಹಾಲಿವುಡ್‌ಗೆ ರಿಮೇಕ್ ಆಗುತ್ತಿರುವ ಮೊದಲ ತಮಿಳು ಸಿನಿಮಾ ಎಂಬ ಹಿರಿಮೆಗೆ ‘ಮಹಾರಾಜ’ ಪಾತ್ರವಾಗಲಿದೆ. ‘ಇಂಟರ್‌ಸ್ಟೆಲ್ಲಾರ್’ ನಟ ಮ್ಯಾಥ್ಯೂ ಮೆಕೊನಹೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಿರ್ದೇಶಕ ಸೇರಿ ತಾರಾ-ತಾಂತ್ರಿಕ ಬಳಗದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ನಿರ್ಮಾಪಕ ಸುಧನ್ ‘‘ಮಹಾರಾಜ’ ಥಿಯೇಟರ್ ಹಾಗೂ ಒಟಿಟಿಯಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು. ಹಾಗೆಯೇ, ಚೀನದಲ್ಲೂ ಸಕ್ಸಸ್ ಆಗಿತ್ತು. ಇದೀಗ ಈ ಸಿನಿಮಾವನ್ನು ಹಾಲಿವುಡ್ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯು ರಿಮೇಕ್ ಮಾಡಲು ಮುಂದಾಗುತ್ತಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ. ಇನ್ನು ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ ‘ಮಹಾರಾಜ’ದ ವಿಜಯ್ ಸೇತುಪಥಿ ಜತೆಗೆ ಅನುರಾಗ್ ಕಶ್ಯಪ್, ಸಚನಾ ನೇಮಿದಾಸ್, ಬೇಬಿ ಶೈನಿಕಾ, ಅಭಿರಾಮಿ, ಮಮತಾ ಮೋಹನದಾಸ್ ತಾರಾಗಣದಲ್ಲಿದ್ದರು. -ಏಜೆನ್ಸೀಸ್