ಸ್ವರೂಪಿಣಿ ಹೊಸ ‘ಒಟಿಪಿ’: ಮೂಲ ಹೆಸರಿನ ಮೂಲಕ ಹೊಸ ಭರವಸೆ ಕಾಣುತ್ತಿರುವ ನಟಿ

ನಟಿ ಸ್ವರೂಪಿಣಿ
ನಟಿ ಸ್ವರೂಪಿಣಿ
Published on

ಪ್ರಮುಖ ಮುಖ್ಯಾಂಶಗಳು

  • ‘ಲವ್ ಒಟಿಪಿ’ ಮೂಲಕ ಹೊಸ ಭರವಸೆ ಕಾಣುತ್ತಿರುವ ಸ್ವರೂಪಿಣಿ
  • ಎರಡು ಶೇಡ್ ಇರುವ ಸನಾ ಎಂಬ ಪಾತ್ರ
  • 25 ದಿನಗಳಲ್ಲಿ 10 ಕೆಜಿ ಇಳಿಕೆ:
ಬೆಂಗಳೂರು : ‘ದೃಶ್ಯ’ ಸರಣಿ, ‘ಶಿವಾಜಿ ಸುರತ್ಕಲ್’ ಚಿತ್ರಗಳ ಖ್ಯಾತಿಯ ನಟಿ ಆರೋಹಿ ನಾರಾಯಣ್ ಇದೀಗ ಸ್ವರೂಪಿಣಿ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದಾರೆ. ಸ್ವರೂಪಿಣಿ ಎಂಬುದೇ ಅವರ ಮೂಲ ಹೆಸರಾಗಿತ್ತು. ಆದರೆ, ಚಿತ್ರರಂಗಕ್ಕೆ ಬಂದಾಗ ಆರೋಹಿ ಎಂದು ಬದಲಾಯಿಸಿಕೊಂಡಿದ್ದರು. ಇದೀಗ ಅವರು ಮತ್ತೆ ಹಳೆಯ ಹೆಸರಿಗೆ ಮರಳಿದ್ದು, ಇಂದು ತೆರೆ ಕಾಣುತ್ತಿರುವ ಅನೀಶ್ ನಟಿಸಿ, ನಿರ್ದೇಶಿಸಿರುವ ‘ಲವ್ ಒಟಿಪಿ’ ಮೂಲಕ ಹೊಸ ಭರವಸೆ ಕಾಣುತ್ತಿದ್ದಾರೆ. ಇಡೀ ಜರ್ನಿ ಕುರಿತು ‘ವಿಜಯವಾಣಿ’ ಜತೆ ಮೆಲುಕು ಹಾಕಿರುವ ಸ್ವರೂಪಿಣಿ, ‘ಕರೊನಾ ಬಳಿಕ ದೊರೆತ ಮೊದಲ ಪ್ರಾಜೆಕ್ಟ್ ಇದು.‘ಭೀಮಸೇನ ನಳಮಹಾರಾಜ’ ನೇರವಾಗಿ ಒಟಿಟಿಯಲ್ಲಿ ತೆರೆಕಂಡಿತ್ತು. ಆ ಬಳಿಕ ಒಳ್ಳೆಯ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೆ. ಆಗ ಅನೀಶ್ ಕರೆದು ತುಂಬಾ ವಿಭಿನ್ನ ಎನಿಸುವ ಕಥೆ ಹೇಳಿದರು. ಬೇರೆ ಬೇರೆ ರೀತಿಯ ಎಮೋಷನ್ಸ್ ತೋರಿಸುವ ಹಾಗೂ ಪ್ರತಿಭಾ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ ಇರುವ ಪಾತ್ರ ಇದಾಗಿತ್ತು. ಅದಕ್ಕೆ ಒಪ್ಪಿಕೊಂಡೆ. ಹದಿಹರೆಯ ವಯಸ್ಸಿನ ಹಾಗೂ ಪ್ರಜ್ಞಾವಂತೆ ಹುಡುಗಿಯಾಗಿ ಎರಡು ಶೇಡ್ ಇರುವ ಸನಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಎರಡು ಶೇಡ್‌ಗಳಿಗೂ ಪ್ರತ್ಯೇಕ ದೇಹಭಾಷೆ, ಭಾವನೆಯಿದ್ದು, ಹೆಚ್ಚು ಸ್ಕೋಪ್ ಇರುವ ಪಾತ್ರ. ಇಡೀ ನನ್ನ ಪ್ರತಿಭೆ ಹಾಗೂ ನಟನಾ ಕೌಶಲವನ್ನು ಹೊರತಂದ ಕಥೆಯಿದು ಎಂದರೆ ತಪ್ಪಾಗದು’ ಎಂದು ಖುಷಿ ಹಂಚಿಕೊಳ್ಳುತ್ತಾರೆ. 
25 ದಿನಗಳಲ್ಲಿ 10 ಕೆಜಿ ಇಳಿಕೆ: ಸ್ವರೂಪಿಣಿ ‘ಲವ್ ಒಟಿಪಿ’ ಪಾತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದಾರಂತೆ. ಮಾನಸಿಕವಾಗಿ ಮಾತ್ರವಲ್ಲದೇ ದೈಹಿಕವಾಗಿಯೂ ನಡೆಸಿರುವ ಸಿದ್ಧತೆಗಳ ಬಗ್ಗೆ, ‘ಕಲಾವಿದರು ಯಾವಾಗಲೂ ತಯಾರಿಯಲ್ಲಿರಬೇಕು ಎನ್ನುವುದು ಅನೀಶ್ ಮಾತು. ಶೂಟಿಂಗ್ ಆರಂಭವಾಗಲು 25 ದಿನ ಬಾಕಿ ಇತ್ತು. ಆಗ ಕರೆ ಮಾಡಿ, 8ರಿಂದ 10 ಕೆಜಿ ಕಡಿಮೆಯಾಗಬೇಕು ಎಂದರು. ನಾನು ಕೂಡ ವರ್ಕೌಟ್ ಮಾಡಿ ತಿಂಗಳಲ್ಲಿ ತೂಕ ಕಡಿಮೆ ಮಾಡಿಕೊಂಡೆ. ಇನ್ನು ಸ್ಥಳದಲ್ಲಿಯೇ ಡೈಲಾಗ್ ಬದಲಿಸಲಾಗುತ್ತಿತ್ತು. ಅದನ್ನು ತಕ್ಷಣ ಪಿಕ್ ಮಾಡುವುದು ಕೂಡ ಸವಾಲಾಗಿತ್ತು’ ಎನ್ನುವ ಸ್ವರೂಪಿಣಿ, ‘ಅನೀಶ್ ಸರ್ ಒಬ್ಬ ವರ್ಕೋಹಾಲಿಕ್. ವರ್ಷದಿಂದ ಅವರು ನಿದ್ದೆ ಮಾಡಿದ್ದು ಕಡಿಮೆ. ಸದಾ ‘ಲವ್ ಒಟಿಪಿ’ ಧ್ಯಾನದಲ್ಲಿರುತ್ತಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಸದ್ಯ ಮತ್ತೊಂದು ಕನ್ನಡ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿರುವ ಸ್ವರೂಪಿಣಿ, ತಮಿಳಿಗೂ ಡೆಬ್ಯೂ ಆಗುತ್ತಿದ್ದಾರೆ. ಸದ್ಯದಲ್ಲೇ ಈ ಎರಡು ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net