ಪತ್ನಿಯನ್ನು ಕಳೆದುಕೊಂಡಿರುವ ನಿವೃತ್ತ ಎಂಜಿನಿಯರ್ ರಾಮಣ್ಣನಿಗೆ (ಸುಂದರ್ ರಾಜ್) ಮಗಳು ಸೌಮ್ಯಳೇ (ಸತ್ಯಶ್ರೀ) ಪ್ರಪಂಚ. ಮಲೇಷಿಯಾ ಏರ್ಲೈನ್ಸ್ನಲ್ಲಿ ಗಗನಸಖಿ ಕೆಲಸಕ್ಕೆಂದು ಹೋಗುವ ಆಕೆ ಕಣ್ಮರೆಯಾಗುತ್ತಾಳೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದರೆ, ಮಲೇಷಿಯಾದಲ್ಲೇ ಹೋಗಿ ಹುಡುಕಿ ಎಂಬ ಉತ್ತರ. ಕಾರ್ಪೊರೇಟರ್ನಿಂದ ಹಿಡಿದು ಶಾಸಕ, ಸಂಸದರ ಬಳಿ ಹೋಗಿ ಅಳಲು ತೋಡಿಕೊಂಡರೂ ಯಾರೂ ಸ್ಪಂದಿಸುವುದಿಲ್ಲ. ಕೊನೆಗೆ ಪರಿಚಯದವರು ಕಲಾಸಿಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್.ಕೆ. ಉಮೇಶ್ (ಹರ್ಷ ಅರ್ಜುನ್) ಬಳಿ ವಿಷಯ ತಿಳಿಸಲು ಹೇಳುತ್ತಾರೆ. ರಾಮಣ್ಣನ ನೋವಿಗೆ ಸ್ಪಂದಿಸುವ ದಕ್ಷ ಅಧಿಕಾರಿ ಉಮೇಶ್ ಅನ್-ಅಫಿಷಿಯಲ್ಲಾಗಿ ಐದು ವರ್ಷಗಳ ಹಿಂದಿನ ಪ್ರಕರಣದ ಬೆನ್ನು ಹತ್ತುತ್ತಾರೆ. ಅವರ ತಂಡವೂ ಅಧಿಕಾರಿಯ ಬೆನ್ನಿಗೆ ನಿಲ್ಲುತ್ತದೆ. ಅಲ್ಲಿಂದ ಸೌಮ್ಯ ಮತ್ತು ಪ್ರಭಾಕರ್ ರಾಜು (ಅಮರ್) ನಡುವಿನ ಲವ್ಸ್ಟೋರಿ ತೆರೆದುಕೊಳ್ಳುತ್ತದೆ. ಆತನ ಮೇಲಿದ್ದ ಅನುಮಾನ, ಕೊನೆಗೆ ರಾಮಣ್ಣನತ್ತಲೇ ತಿರುಗುತ್ತದೆ. ಕರ್ನಾಟಕದಿಂದ ಆರಂಭವಾಗುವ ಕಥೆ ತಮಿಳುನಾಡು, ಆಂಧ್ರ ಪ್ರದೇಶಕ್ಕೂ ಸಂಚರಿಸುತ್ತದೆ. ಹಾಗಾದರೆ ಸೌಮ್ಯ ಕಣ್ಮರೆ ಹಿಂದಿನ ಕಥೆಯೇನು? ಆಕೆ ಎಲ್ಲಿಗೆ ಹೋದಳು? ಏನಾದಳು? ಮತ್ತೆ ವಾಪಸ್ ಬರುತ್ತಾಳಾ? "ಚಾರ್ಜ್ಶೀಟ್ 03-08' ನೋಡಿ.