mark review: ಮಾಸ್ ಕಥೆಯಲ್ಲಿ ಕ್ಲಾಸ್ ಕಿಚ್ಚನಿಗೆ ಫುಲ್​ ಮಾರ್ಕ್

ಸುದೀಪ್​
ಸುದೀಪ್​
Published on

ಪ್ರಮುಖ ಮುಖ್ಯಾಂಶಗಳು

  • ಮೂರು ವಿಷಯಗಳ ಸುತ್ತ ಕಥೆ ಹೆಣೆದ ವಿಜಯ್ ಕಾರ್ತಿಕೇಯ್​
  • ಸುದೀಪ್​ ಮಾಸ್ ಅವತಾರಕ್ಕೆ ಫ್ಯಾನ್ಸ್ ಫಿದಾ
  • ಮೊದಲ ದಿನವೇ ಮಾರ್ಕ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ
ಚಿತ್ರ: ಮಾರ್ಕ್
ನಿರ್ದೇಶನ: ವಿಜಯ್ ಕಾರ್ತಿಕೇಯ
ತಾರಾಗಣ: ಸುದೀಪ್, ನವೀನ್ ಚಂದ್ರ, ಶೈನ್ ಟಾಮ್ ಚಾಕೋ, ಯೋಗಿ ಬಾಬು, ಗುರು ಸೋಮಸುಂದರಂ, ಪ್ರತಾಪ್, ಗೋಪಾಲ್, ರೋಶಿನಿ, ಅರ್ಚನಾ ಮತ್ತಿತರರು.
ಶಿವ ಸ್ಥಾವರಮಠ
ಪ್ರಭಾವಿ ಸಚಿವನ ಮಗಳ ಜತೆ ಸಹೋದರ ರುದ್ರನ (ವಿಕ್ರಾಂತ್) ಮದುವೆ ಮಾಡಲು ಭದ್ರ (ನವೀನ್) ಮುಂದಾಗಿರುವಾಗಲೇ ರಾತ್ರೋರಾತ್ರಿ ಆತ ಪ್ರೇಯಸಿ ಜತೆ ಓಡಿಹೋಗಿರುತ್ತಾನೆ. ಅದೇ ಸಮಯದಲ್ಲಿ ಮಂಗಳೂರು ಬಂದರಿನಿಂದ ಸಾಗಿಸಲು ತಂದಿದ್ದ 2000 ಕೋಟಿ ರೂ. ಮೌಲ್ಯದ ಕಚ್ಚಾ ಡ್ರಗ್ಸ್ ಪೊಲೀಸರ ಕೈಗೆ ಸಿಕ್ಕು ಸ್ಟೀನ್ (ಗುರು) ಭದ್ರನ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಈ ಮಧ್ಯೆಯೇ ರಾಜ್ಯದಲ್ಲಿ 18 ಮಕ್ಕಳ ಅಪಹರಣ ಸುದ್ದಿ ಚರ್ಚೆಯಾಗುತ್ತದೆ. ಈ ಮೂರು ಘಟನೆಗಳು ಬೇರೆ ಬೇರೆಯಾದರು, ಇದೆಕ್ಕೆಲ್ಲಾ ಸೂತ್ರಧಾರ ಒಬ್ಬನೇ. ಆದಿಕೇಶವ (ಶೈನ್). ಹಾಗೆಯೇ ಈ ಮೂರು ಸಮಸ್ಯೆಗಳ ವಿರುದ್ಧ ಹೋರಾಡುವವನೂ ಒಬ್ಬನೇ. ‘ಮಾರ್ಕ್’ ಆಲಿಯಾಸ್ ಅರ್ಜುನ್ ಮಾರ್ಕಂಡೇಯ (ಸುದೀಪ್). ಮತ್ತಲ್ಲಿದ್ದರೂ, ಅಮಾನತಿನಲ್ಲಿದ್ದರೂ ಸದಾ ಡ್ಯೂಟಿಯಲ್ಲಿರುತ್ತಾನೆ ಎಂಬುದು ಮಾರ್ಕ್ ವರಸೆ. ಅದೇ ಮತ್ತು, ಗಮ್ಮತ್ತಿನೊಂದಿಗೆ ಇಡೀ ಪ್ರಕರಣವನ್ನು ‘ಮಾರ್ಕ್’ ಹೇಗೆ ಭೇದಿಸುತ್ತಾನೆ ಎಂದು ತಿಳಿಯಲು ಸಿನಿಮಾ ನೋಡಿ.
‘ಮ್ಯಾಕ್ಸ್’ ಬಳಿಕ ವಿಜಯ್ ಕಾರ್ತಿಕೇಯ ನಿರ್ದೇಶನದ ಎರಡನೇ ಸಿನಿಮಾ ಇದಾದರೂ, ಮೊದಲ ಚಿತ್ರದ ಛಾಯೆ ‘ಮಾರ್ಕ್’ನಲ್ಲೂ ಕಾಣಬಹುದು. ಪಾತ್ರಗಳ ವಿನ್ಯಾಸ, ಟೈಮ್‌ಲೈನ್‌ನಲ್ಲಿ ಸಾಗುವ ಕಥೆ ಹಾಗೂ ರಾತ್ರಿ ಕಾರ್ಯಾಚರಣೆ ಗಮನಿಸಬಹುದಾದ ಹೋಲಿಕೆಗಳು. ಆದರೆ, ಕಥೆಯಲ್ಲಿ ವಿಭಿನ್ನತೆ ಕಾಯ್ದುಕೊಂಡಿದ್ದಾರೆ. ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ, ಮಕ್ಕಳ ಅಪಹರಣ ಹಾಗೂ ರಾಜಕೀಯ ಸಂಘರ್ಷದ ಅಂಶಗಳನ್ನು ತೆರೆ ಮೇಲೆ ತಂದಿದ್ದು, ಅದಕ್ಕೆ ತಕ್ಕ ಮಾಸ್ ಎಲಿಮೆಂಟ್ ಜೋಡಿಸಿದ್ದಾರೆ. 48 ಗಂಟೆಗಳಲ್ಲಿ ನಡೆಯುವ ಕಥೆಯನ್ನು ವಿಜಯ್ ಚಕಾಚಕ್ ಎಂಬಂತೆ ನಿರೂಪಿಸಿದ್ದಾರೆ. ವೇಗವಾಗಿ ಸಾಗುವ ಕಥೆಯಲ್ಲಿ ಅಷ್ಟೇ ಕುತೂಹಲ, ತಳಮಳ ಹಾಗೂ ಮಾಸ್ ಆ್ಯಕ್ಷನ್ ನೋಡಬಹುದು. ಎಲ್ಲಿಯೂ ಬೋರ್ ಅನಿಸುವುದಿಲ್ಲ. ಒಂದೇ ಕಥೆಯಲ್ಲಿ ವಿವಿಧ ಆಯಾಮಗಳಿದ್ದು, ಅಷ್ಟು ಸುಲಭಕ್ಕೆ ಊಹೆಗೆ ಸಿಗುವುದಿಲ್ಲ. ಹೀಗಾಗಿ, ಈ ಬಾರಿ ವಿಜಯ್ ಕಾರ್ತಿಕೇಯ ಹೆಚ್ಚಿನ ‘ಮಾರ್ಕ್’ ಗಳಿಸುತ್ತಾರೆ. ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ಸ್ಥಳಗಳು ಇಡೀ ಚಿತ್ರತಂಡದ 110 ದಿನಗಳ ಶೂಟಿಂಗ್ ಪರಿಶ್ರಮಕ್ಕೆ ಸಾಕ್ಷಿಯಾಗಿವೆ.
ನಟ ಸುದೀಪ್ ಇಡೀ ಕಥೆಯನ್ನು ಹೊತ್ತು ಸಾಗಿದ್ದಾರೆ. ಸ್ಟೈಲಿಶ್ ಮ್ಯಾನರಿಸಂ, ಆ್ಯಕ್ಷನ್ ಹಾಗೂ ಮಾಸ್ ಡೈಲಾಗ್‌ಗಳಿಂದಲೇ ಅಭಿಮಾನಿಗಳನ್ನು ರಂಜಿಸುತ್ತಾರೆ. ಕಷ್ಟದ ಸಾಹಸ ದೃಶ್ಯಗಳನ್ನು ಸುದೀಪ್ ಸರಾಗವಾಗಿ ಮಾಡಿದ್ದು, ಕೆಲ ಆ್ಯಕ್ಷನ್ ದೃಶ್ಯಗಳಲ್ಲಿ ವಿಜೃಂಭಿಸಿದ್ದಾರೆ. ನಿರಂತರ ಶೂಟಿಂಗ್‌ನಲ್ಲಿದ್ದ ಕಾರಣ ಸುದೀಪ್ ಎಲ್ಲಿಯೂ ಬಳಲಿದಂತೆ ಕಾಣುವುದಿಲ್ಲ. ಪ್ರತಿ ಫ್ರೇಮ್​ನಲ್ಲೂ ತಾಜಾವಾಗಿ ಕಾಣಿಸಿಕೊಂಡಿದ್ದಾರೆ. ನವೀನ್ ಚಂದ್ರ ಹಾಗೂ ಶೈನ್ ಟಾಮ್ ಚಾಕೋ ಅಬ್ಬರಿಸಿದ್ದು, ಇಬ್ಬರು ಕಲಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಗುರು ಸೋಮುಸುಂದರಂ, ಡ್ರ್ಯಾಗನ್ ಮಂಜು, ಯೋಗಿ ಬಾಬು ಕೆಲ ದೃಶ್ಯಗಳಿಗೆ ಸೀಮಿತವಾದರೂ ಇಷ್ಟವಾಗುತ್ತಾರೆ. ಗೋಪಾಲಕೃಷ್ಣ ದೇಶಪಾಂಡೆ, ರೋಶಿನಿ ಪ್ರಕಾಶ್, ಪ್ರತಾಪ್ ನಾರಾಯಣ್, ಅರ್ಚನಾ ಕೊಟ್ಟಿಗೆ, ದೀಪ್ಶಿಕಾ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಇಡೀ ಕಥೆಯ ಮಾಸ್ ಲೆವೆಲ್ ಹೆಚ್ಚಿಸಿದೆ. ಸಾಹಸ ದೃಶ್ಯಗಳು ಕಿಚ್ಚನ ಖಡಕ್ ಮ್ಯಾನರಿಸಂಗೆ ಪೂರಕವಾಗಿ ಮೂಡಿಬಂದಿದ್ದು, ಅಷ್ಟೇ ಸ್ಟೈಲಿಶ್ ಆಗಿ ಅವನ್ನು ಶೇಖರ್ ಚಂದ್ರ ಸೆರೆಹಿಡಿದಿದ್ದಾರೆ. ಸುದೀಪ್ ಅಭಿಮಾನಿಗಳು ಮತ್ತು ಆ್ಯಕ್ಷನ್ ಪ್ರಿಯರಿಗೆ ‘ಮಾರ್ಕ್’ ಪಕ್ಕಾ ಪೈಸಾ ವಸೂಲ್!
ರೇಟಿಂಗ್ 3.5
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net