spark poster
ಸ್ಪಾರ್ಕ್​ ಪೋಸ್ಟರ್

SPARK MOVIE REVIEW: ಬ್ಯಾಂಕ್ ಹಗರಣದ ಸುತ್ತ ಹಾವು-ಏಣಿ ಆಟ

ಟೈಟಲ್ ‘ಸ್ಪಾರ್ಕ್’ ನಂತೆಯೇ ಕಥೆಯಲ್ಲೂ ಹೋರಾಟದ ಹಾಗೂ ಸಾಹಸದ ಕಿಡಿಯಂತಹ ಕಥೆಯನ್ನು ಮಹಾಂತೇಶ್ ನಿರೂಪಿಸಿದ್ದಾರೆ. ಸಹಕಾರಿ ಬ್ಯಾಂಕ್‌ಗಳ ಸ್ಥಾಪನೆ ಹಿಂದಿನ ‘ದುರುದ್ದೇಶ’ ಹಾಗೂ ಮೋಸಗಳು ಹೇಗಾಗುತ್ತವೆ ಎಂಬುದರ ಸಣ್ಣ ಝಲಕ್ ಇಲ್ಲಿ ನೀಡಿದ್ದಾರೆ.
Published on: 
SPARK MOVIE REVIEW(3 / 5)

ಚಿತ್ರ: ಸ್ಪಾರ್ಕ್

ನಿರ್ದೇಶನ: ಮಹಾಂತೇಶ ಹಂದ್ರಾಳ

ತಾರಾಗಣ: ನಿರಂಜನ್ ಸುಧೀಂದ್ರ, ‘ನೆನಪಿರಲಿ’ ಪ್ರೇಮ್, ರಚನಾ ಇಂದರ್, ಭಾವನಾ ಮೆನನ್, ಧರ್ಮಣ್ಣ ಕಡೂರು ಮತ್ತಿತರರು

ಶಿವ ಸ್ಥಾವರಮಠ

ಪ್ರತಿಷ್ಠಿತ ಬ್ಯಾಂಕ್‌ವೊಂದರಲ್ಲಿ 800 ಕೋಟಿ ರೂ. ಹಗರಣದಿಂದಾಗಿ ಠೇವಣಿ ಇಟ್ಟ ಸಾಮಾನ್ಯ ಜನ ಬೀದಿಗೆ ಬರುವಂತಾಗುತ್ತದೆ. ನ್ಯಾಯಕ್ಕಾಗಿ ಅವಲತ್ತುಕೊಳ್ಳುವ ಸಮಯದಲ್ಲಿ ಸರ್ಕಾರವು ಹಗರಣದ ತನಿಖೆಯನ್ನು ಪೊಲೀಸ್ ಅಧಿಕಾರಿ ಎಸ್‌ಪಿ ರಂಜಿತ್ ಕುಮಾರ್‌ಗೆ (ಪ್ರೇಮ್) ವಹಿಸುತ್ತದೆ. ಒಂದೆಡೆ ರಂಜಿತ್ ತನಿಖೆ ಆರಂಭಿಸಿದರೆ, ಇನ್ನೊಂದೆಡೆ ತನಿಖಾ ಪತ್ರಕರ್ತ ಅಭಿರಾಮ್ (ನಿರಂಜನ್) ಈ ಹಗರಣವನ್ನು ಬಯಲಿಗೆಳೆಯುವ ಸಾಹಸಕ್ಕಿಳಿಯುತ್ತಾನೆ. ಹೀಗಿರುವಾಗಲೇ ರಂಜಿತ್ ಸಹೋದರಿ ಮಧು (ರಚನಾ), ಅಭಿರಾಮ್ ಪರಿಚಯವಾಗಿ ಇಬ್ಬರು ಪ್ರೀತಿಸುತ್ತಾರೆ. ಇದು ಅಣ್ಣನಿಗೆ ತಿಳಿಯುತ್ತದೆ. ಒಂದೆಡೆ ಹಗರಣವನ್ನ ಬಯಲಿಗೆಳೆಯಬೇಕು ಎಂದು ಇಬ್ಬರ ನಡುವೆ ಸವಾಲು ಇರುವಾಗ ಸಹೋದರಿಯ ಪ್ರೀತಿ-ಪ್ರೇಮದ ವಿಷಯ ರಂಜಿತ್‌ಗೆ ಇರುಸು-ಮುರುಸು ತರಿಸುತ್ತದೆ. ಮೊದಲು ಈ ದೊಡ್ಡ ಸ್ಕ್ಯಾಮ್‌ನಲ್ಲಿ ರಂಜಿತ್ ಹೆಸರು ಕೇಳಿಬರುತ್ತದೆಯಾದರೂ, ಅದರ ಹಿಂದಿನ ಮುಖವಾಡಗಳೇ ಬೇರೆಯಾಗಿರುತ್ತವೆ. ಹಾಗಾದರೆ ಈ ಹಗರಣದ ರೂವಾರಿ ಯಾರು? ರಂಜಿತ್ ಮತ್ತು ಅಭಿರಾಮ್ ಇಬ್ಬರಲ್ಲಿ ಯಾರು ಮೊದಲಿಗೆ ಅವರನ್ನು ಬಯಲಿಗೆಳೆಯುತ್ತಾರೆ? ಆ ಕುರಿತ ಪೊಲೀಸ್ ಅಧಿಕಾರಿ ಮತ್ತು ಪತ್ರಕರ್ತನ ನಡುವಿನ ಬೆಂಕಿಯಂಥ ಹೋರಾಟವೇ ‘ಸ್ಪಾರ್ಕ್’ ಚಿತ್ರದ ಮುಂದುವರಿದ ಕಥೆ.

ಟೈಟಲ್ ‘ಸ್ಪಾರ್ಕ್’ ನಂತೆಯೇ ಕಥೆಯಲ್ಲೂ ಹೋರಾಟದ ಹಾಗೂ ಸಾಹಸದ ಕಿಡಿಯಂತಹ ಕಥೆಯನ್ನು ಮಹಾಂತೇಶ್ ನಿರೂಪಿಸಿದ್ದಾರೆ. ಸಹಕಾರಿ ಬ್ಯಾಂಕ್‌ಗಳ ಸ್ಥಾಪನೆ ಹಿಂದಿನ ‘ದುರುದ್ದೇಶ’ ಹಾಗೂ ಮೋಸಗಳು ಹೇಗಾಗುತ್ತವೆ ಎಂಬುದರ ಸಣ್ಣ ಝಲಕ್ ಇಲ್ಲಿ ನೀಡಿದ್ದಾರೆ. ಹಗರಣದ ಹಿಂದೆ ಇಣುಕು ಹಾಕುವ ಜಾತಿ, ಅಧಿಕಾರ ಹಾಗೂ ಪ್ರತಿಷ್ಠೆ ಹೀಗೆ ಹಲವು ಆಯಾಮಗಳನ್ನು ಚಿತ್ರಿಸಲಾಗಿದೆ. 149 ನಿಮಿಷಗಳ ಕಥೆ ಕೆಲವೊಮ್ಮೆ ಸುದೀರ್ಘ ಅಂತನ್ನಿಸುತ್ತದೆ. ನಿರಂಜನ್ ಸುಧೀಂದ್ರ ಮಾಸ್ ಜತೆಗೆ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಫೈಟ್, ಡಾನ್ಸ್‌ನಲ್ಲಿ ಮಿಂಚಿದ್ದು, ನಟನೆ ಸಹಜವಾಗಿ ಮೂಡಿಬಂದಿದೆ. ಪ್ರೇಮ್ ವಿಭಿನ್ನ ಅವತಾರ ಇಷ್ಟವಾಗುತ್ತದೆ. ಭಾವನಾ ಮೆನನ್ ಪಾತ್ರ ಇಡೀ ಚಿತ್ರದ ಅತಿದೊಡ್ಡ ಟ್ವಿಸ್ಟ್. ಅದನ್ನು ಥಿಯೇಟರ್‌ನಲ್ಲಿಯೇ ನೋಡಬೇಕು. ರಚನಾ ಇಂದರ್, ಧರ್ಮಣ್ಣ ಕಡೂರು, ರಮೇಶ್ ಇಂದಿರಾ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net