"ರಂಗಿತರಂಗ', "ವಿಕ್ರಾಂತ್ ರೋಣ' ಸೇರಿ ಕೆಲ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ, ಕ್ರಮೇಣ "ಅಜ್ಞಾತವಾಸಿ', "ಲವ್ ಯೂ ಮುದ್ದು', "ಸೀಟ್ ಎಡ್ಜ್' ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿರುವ ನಟ ಸಿದ್ದು ಮೂಲಿಮನಿ ಇದೀಗ ಕಾಲಿವುಡ್ಗೆ ಹಾರಿದ್ದಾರೆ. ಅವರು ನಟಿಸಿರುವ "ಕೋಲ್ಡ್ ಕಾಲ್' ಎಂಬ ತಮಿಳು ಸಿನಿಮಾ ಇದೇ 18ರಂದು ರಿಲೀಸ್ ಆಗಲಿದೆ. ಕಾಲಿವುಡ್ ಡೆಬ್ಯೂ ಬಗ್ಗೆ ಸಿದ್ದು, ""ಕೋಲ್ಡ್ ಕಾಲ್' ನಿರ್ದೇಶಕ ತಂಬಿದುರೈ ಅವರ "ಇಂಟರ್ಪ್ರೀಟರ್' ಎಂಬ ಕಿರುಚಿತ್ರದಲ್ಲಿ ಕಿವುಡ, ಮೂಗನ ಪಾತ್ರದಲ್ಲಿ ನಟಿಸಿದ್ದೆ. ಆಗಲೇ ಅವರು ನಾನು ಸಿನಿಮಾ ನಿರ್ದೇಶಿಸಿದರೆ ಖಂಡಿತ ಒಟ್ಟಿಗೆ ಕೆಲಸ ಮಾಡೋಣ ಎಂದಿದ್ದರು. ಅದರಂತೆ "ಕೋಲ್ಡ್ ಕಾಲ್'ನಲ್ಲಿ ಅವಕಾಶ ನೀಡಿದರು. ಇದು ಓದು ಮುಗಿಸಿ, ಕೆಲಸಕ್ಕಾಗಿ ಅಲೆದು ಕೊನೆಗೆ ಸೇಲ್ಸ್ಮನ್ಗಳಾಗುವ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ನಾಲ್ವರು ಹುಡುಗರ ಕಥೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಅವರ ಜೀವನ, ಹೋರಾಟದ ಸುತ್ತ ಕಥೆ ಸಾಗುತ್ತದೆ. ನಾನಿಲ್ಲಿ ಗೌತಮ್ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಚಿತ್ರರಂಗಕ್ಕೆ ಬರುವ ಮುನ್ನ ಐಪಿಎಲ್ನಲ್ಲಿ ನೂಡಲ್ಸ್, ಚಾಕಲೇಟ್ಸ್ ಮಾರಿದ್ದೇನೆ. ಕಂಡಕ್ಟರ್ ಆಗಿಯೂ ಕೆಲಸ ಮಾಡಿದ್ದೇನೆ. ಅಂದಿನ ಅನುಭವಗಳು ಈ ಸಿನಿಮಾ ವೇಳೆ ನನಗೆ ತುಂಬ ಉಪಯೋಗಕ್ಕೆ ಬಂತು' ಎಂದು ಅನುಭವ ಹಂಚಿಕೊಳ್ಳುತ್ತಾರೆ.