ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು? ಪತಿ ಸುಮಂತ್​ರಿಂದ ವಿಚ್ಛೇದನ ಕೋರಿ ಕೋರ್ಟ್​ ಮೆಟ್ಟಿಲೇರಿದ ನಟಿ!? Shubha Poonja

ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು? ಪತಿ ಸುಮಂತ್​ರಿಂದ ವಿಚ್ಛೇದನ ಕೋರಿ ಕೋರ್ಟ್​ ಮೆಟ್ಟಿಲೇರಿದ ನಟಿ!? Shubha Poonja
ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು? ಪತಿ ಸುಮಂತ್​ರಿಂದ ವಿಚ್ಛೇದನ ಕೋರಿ ಕೋರ್ಟ್​ ಮೆಟ್ಟಿಲೇರಿದ ನಟಿ!? Shubha Poonja
Published on

ಪ್ರಮುಖ ಮುಖ್ಯಾಂಶಗಳು

  • ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಹಾಗೂ ಕರಾವಳಿ ಸುಂದರಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು ವದಂತಿ
  • ಮದುವೆಯಾಗಿ ನಾಲ್ಕು ವರ್ಷ ಕಳೆಯುವಷ್ಟರಲ್ಲಿಯೇ ದಂಪತಿ ಪರಸ್ಪರ ದೂರಾಗಲು ನಿರ್ಧರಿಸಿದ್ದಾರೆಂಬ ಮಾಹಿತಿ
  • ಪರಸ್ಪರ ಒಪ್ಪಿಗೆಯ ಮೇರೆಗೆ ಶುಭಾ ಮತ್ತು ಸುಮಂತ್​ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಗಾಸಿಪ್ ಹರಡುತ್ತಿದೆ
  • ಶುಭಾ ಪೂಂಜಾ ಅವರಾಗಲಿ ಅಥವಾ ಪತಿ ಸುಮಂತ್ ಆಗಲಿ ಡಿವೋರ್ಸ್​ ಬಗ್ಗೆ ಎಲ್ಲೂ ಅಧಿಕೃತ ಹೇಳಿಕೆ ನೀಡಿಲ್ಲ
ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಹಾಗೂ ಕರಾವಳಿ ಸುಂದರಿ ಶುಭಾ ಪೂಂಜಾ ( Shubha Poonja ) ಅವರ ವೈಯಕ್ತಿಕ ಜೀವನದ ಕುರಿತು ಇದೀಗ ಗಾಂಧಿನಗರದ ಗಲ್ಲಿಗಳಲ್ಲಿ ಹೊಸದೊಂದು ಗಾಸಿಪ್‌ ಭಾರಿ ಸದ್ದು ಮಾಡುತ್ತಿದೆ. ಸದಾ ಲವಲವಿಕೆಯಿಂದ ಇರುತ್ತಾ, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟಿ ಶುಭಾ ಪೂಂಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿಯೊಂದು ಸದ್ಯ ಕನ್ನಡ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಮದುವೆಯಾಗಿ ನಾಲ್ಕು ವರ್ಷ ಕಳೆಯುವಷ್ಟರಲ್ಲಿಯೇ ಈ ದಂಪತಿ ಪರಸ್ಪರ ದೂರಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ಶುಭಾ ಪೂಂಜಾ ಅವರು ತಮ್ಮ ಪತಿಯಿಂದ ಅಧಿಕೃತವಾಗಿ ವಿಚ್ಛೇದನ (ಡೈವೋರ್ಸ್) ಪಡೆಯುವ ಸಲುವಾಗಿ ಈಗಾಗಲೇ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಗಾಸಿಪ್ ಹರಡುತ್ತಿದೆ.
ಕಳೆದ 2022ರ ಜನವರಿ ತಿಂಗಳಲ್ಲಿ ಉದ್ಯಮಿ ಸುಮಂತ್ ಬಿಲ್ಲವ ಅವರೊಂದಿಗೆ ಶುಭಾ ಪೂಂಜಾ ಹಸೆಮಣೆ ಏರಿದ್ದರು. ಅತ್ಯಂತ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಇವರ ವಿವಾಹ ಮಹೋತ್ಸವ ನೆರವೇರಿತ್ತು. ಮದುವೆಯಾದ ಹೊಸತರಲ್ಲಿ ಈ ಜೋಡಿ ಅತ್ಯಂತ ಪ್ರೀತಿಯಿಂದ ಇರುತ್ತಾ, ಕಿರುತೆರೆಯ ಕೆಲವು ಜನಪ್ರಿಯ ರಿಯಾಲಿಟಿ ಶೋಗಳಲ್ಲೂ ಜೊತೆಯಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿತ್ತು. ಆದರೆ, ಈಗ ಹಠಾತ್ತನೆ ಇವರಿಬ್ಬರ ಮಧ್ಯೆ ಮುನಿಸು ಉಂಟಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ವಿಜಯವಾಣಿಗೆ ಪ್ರತಿಕ್ರಿಯೆ?

ಈ ಕಡೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ನಟಿ ಶುಭಾ ಪೂಂಜಾ ಅವರಾಗಲಿ ಅಥವಾ ಅವರ ಪತಿ ಸುಮಂತ್ ಆಗಲಿ ಎಲ್ಲೂ ಅಧಿಕೃತವಾಗಿ ತುಟಿ ಬಿಚ್ಚಿಲ್ಲ. ಈ ಬಗ್ಗೆ ಮಾಹಿತಿ ತಿಳಿಯಲು ನಮ್ಮ ವಿಜಯವಾಣಿ ಪ್ರತಿನಿಧಿ ಶುಭಾ ಪೂಂಜಾ ಅವರಿಗೆ ಕರೆ ಮಾಡಿದಾಗ, ನಾನು ಚೆನ್ನೈನಲ್ಲಿದ್ದೇನೆ. ಈ ಬಗ್ಗೆ ಸದ್ಯಕ್ಕೆ ಏನೂ ಮಾತನಾಡುವುದಿಲ್ಲ ಎಂದು ವಿಚ್ಛೇದನದ ಅರ್ಜಿಯ ಕುರಿತು ಪ್ರತಿಕ್ರಿಯಿಸಲು ನಟಿ ನಿರಾಕರಿಸಿದ್ದಾರೆ. ಇತ್ತ ಸುಮಂತ್ ಕೂಡ ಯಾವುದೇ ಕಾರಣವನ್ನು ಬಹಿರಂಗಪಡಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ಮಾತುಗಳು ಕೇಳಿಬರುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಇವರಿಬ್ಬರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂಬ ಆಯಾಮದಲ್ಲಿ ಚರ್ಚೆಗಳು ನಡೆಯುತ್ತಿವೆ.
ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ, ಕನ್ನಡದ ಸೂಪರ್ ಹಿಟ್ ಚಿತ್ರಗಳಾದ 'ಮೊಗ್ಗಿನ ಮನಸ್ಸು', 'ಜಾಕ್‌ಪಾಟ್', 'ಚಂಡ', 'ಸ್ಲಮ್ ಬಾಲಾ' ಸೇರಿದಂತೆ ಹಲವು ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿದ್ದ ಶುಭಾ ಪೂಂಜಾ, 'ಬಿಗ್ ಬಾಸ್ ಕನ್ನಡ ಸೀಸನ್ 8'ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ತಮ್ಮ ಮುಗ್ಧತೆಯಿಂದ ಮನೆಮಾತಾಗಿದ್ದರು. ಸದ್ಯ ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ಬಿಜಿಯಾಗಿರುವ ನಟಿಯ ವೈಯಕ್ತಿಕ ಜೀವನದ ಬಗ್ಗೆ ಕೇಳಿಬರುತ್ತಿರುವ ಈ ಬೇಸರದ ಸುದ್ದಿ ಕೇವಲ ವದಂತಿಯಾಗಿಯೇ ಉಳಿಯಲಿ, ದಂಪತಿ ಒಂದಾಗಲಿ ಎಂಬುದೇ ಸಿನಿಕುಲದ ಆಶಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net