‘ಬೇಲ್’ ಚಿತ್ರದ ಶಿವಣ್ಣ ಫಸ್ಟ್ ಲುಕ್ ಗೆ ಕಿಚ್ಚ ಸುದೀಪ್ ಏನಂದ್ರು ನೋಡಿ?

ಬೇಲ್​ ಚಿತ್ರದ ಫಸ್ಟ್ ಲುಕ್​
ಬೇಲ್​ ಚಿತ್ರದ ಫಸ್ಟ್ ಲುಕ್​
Published on

ಪ್ರಮುಖ ಮುಖ್ಯಾಂಶಗಳು

  • ವಿಭಿನ್ನ ಅವತಾರಗಳಲ್ಲಿ ಮಿಂಚುತ್ತಿರುವ ಶಿವಣ್ಣ
  • ಬೇಲ್​ ಚಿತ್ರದ ಪಾತ್ರಕ್ಕೆ ಬಂತು ಭರಪೂರ ಮೆಚ್ಚುಗೆ
  • ರಾಜಕುಮಾರ್ ಕಂಡಂತೆ ಕಾಣುತ್ತೀರಿ ಎಂದು ಶಿವಣ್ಣನಿಗೆ ಪ್ರಶಂಸೆ
ಬೆಂಗಳೂರು: ತೆರೆ ಮೇಲೆ ನಟ ಶಿವರಾಜಕುಮಾರ್‌ರನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನಗಳಾಗುತ್ತಿವೆ. ಈಗಾಗಲೇ ತೆಲುಗಿನ ‘ಪೆದ್ದಿ’ಯ ಗೌರ್‌ನಾಯ್ಡು ಮತ್ತು ‘ಗುಮ್ಮಾಡಿ ನರಸಯ್ಯ’ ಚಿತ್ರದ ಪಾತ್ರದ ಸ್ಟ್ ಲುಕ್ ಎಲ್ಲೆಡೆ ಗಮನಸೆಳೆದಿವೆ. ಇದೀಗ ಕನ್ನಡದಲ್ಲೂ ಈ ಪ್ರಯತ್ನವಾಗುತ್ತಿದ್ದು, ಅವರ ‘ಬೇಲ್’ ಚಿತ್ರದ ಫಸ್ಟ್‌ಲುಕ್‌ಗೆ ಎಲ್ಲೆಡೆ ಮೆಚ್ಚುಗೆವ್ಯಕ್ತವಾಗಿದೆ. ಹೌದು, ಶಿವರಾಜಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಬೇಲ್’ ಚಿತ್ರವು ಕಳೆದ ಡಾ.ರಾಜ್ ಜಯಂತಿಗೆ ಘೋಷಣೆಯಾಗಿತ್ತು. ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಧರ್ಮಶಾಲಾದಲ್ಲಿ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಈ ಬಿಜಿ ನಡುವೆಯೂ ಚಿತ್ರತಂಡ ಮಹತ್ವದ ಅಪ್‌ಡೇಟ್ ನೀಡಿದ್ದು, ಶಿವರಾಜಕುಮಾರ್ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಅದರಲ್ಲಿ ಹೊಸ ಅವತಾರ ತಾಳಿದ್ದಾರೆ. ಸೂಟ್ ಧರಿಸಿ, ದಪ್ಪ ಮೀಸೆಯಲ್ಲಿ ಮಿಂಚಿದ್ದಾರೆ. ಟೀಸರ್‌ನಲ್ಲಿ ಮೊದಲಿಗೆ ಮಹಾನಗರದ ರಾತ್ರಿ ಟ್ರಾಫಿಕ್‌ನ ವಿಹಂಗಮ ದೃಶ್ಯ ಕಾಣಲಿದೆ. ಬಳಿಕ ಬಂಗಲೆಯಲ್ಲಿ ಕುಳಿತಿರುವ ಶಿವಣ್ಣನ ಮೊಬೈಲ್‌ಗೆ ಕರೆ ಬರುತ್ತದೆ. ಮಾತನಾಡುತ್ತಿರುವಾಗಲೇ ನಟನ ಲುಕ್ ರಿವೀಲ್ ಮಾಡಲಾಗಿದ್ದು, ನೋಡಿದ ತಕ್ಷಣವೇ ಗೆಟಪ್ ಅಚ್ಚರಿ ನೀಡುತ್ತದೆ. ಕೊನೆಗೆ ಟೀಸರ್‌ನಲ್ಲಿ ಕೊಡೆ ಹಿಡಿದು ನಾಯಿ ಜತೆ ‘ಹ್ಯಾಟ್ರಿಕ್ ಹೀರೋ’ ತಮ್ಮದೇ ಸ್ಟೈಲ್‌ನಲ್ಲಿ ನಡೆದುಕೊಂಡು ಬರುತ್ತಾರೆ. ‘ನೀನು ಹಚ್ಚಿರುವ ಬೆಂಕಿ ಬರೀ ಊರು ಅಲ್ಲ, ದೇಶವನ್ನೇ ಸುಡುತ್ತಿದೆ’ ಎಂಬ ಸಾಯಿಕುಮಾರ್ ಡೈಲಾಗ್‌ಗೆ ಶಿವಣ್ಣ ‘ಇದನ್ನೆಲ್ಲ ಮಾಡಿ ಹೇಗೆ ಸೈಲೆಂಟ್ ಇದ್ದೀಯಾ ಎಂದಾಗ ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವಾಗಲೂ ಆಗಲ್ಲ’ ಎಂಬ ಖಡಕ್ ಪ್ರತಿಕ್ರಿಯೆ ಗಮನಸೆಳೆಯುತ್ತದೆ. ಆಗ ಹಿನ್ನೆಲೆಯಲ್ಲಿ ಸಾಗುವ ಮ್ಯೂಸಿಕ್ ಚಿತ್ರದ ಮೇಲಿನ ಥ್ರಿಲ್ ಹೆಚ್ಚಿಸುತ್ತದೆ. ನೈಜ ಘಟನೆ ಆಧಾರಿತ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್‌ನ ವೆಂಕಟ್ ಕೆ.ನಾರಾಯಣ್ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ವೈದ್ಯ ಛಾಯಾಗ್ರಹಣ,ಶಶಾಂಕ್ ನಾರಾಯಣ್ ಸಂಕಲನ ಚಿತ್ರಕ್ಕಿದೆ. ಇದೇ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿನಿಮಾ ತೆರೆ ಮೇಲೆ ಬರಲಿದೆ.
ಅಣ್ಣಾವ್ರನ್ನೇ ನೋಡಿದಂಗಾಯಿತು
‘ಬೇಲ್’ ಚಿತ್ರದ ಶಿವಣ್ಣ ಲುಕ್‌ಗೆ ಇಡೀ ಸ್ಯಾಂಡಲ್‌ವುಡ್ ಜೈ ಎಂದಿದೆ. ಅದರಲ್ಲೂ ನಟ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿ, ‘ಡಾ.ರಾಜಕುಮಾರ್ ಅವರನ್ನು ನೋಡಿದಂತೆ ಆಗುತ್ತಿದೆ’ ಎಂದು ಪ್ರಶಂಸಿಸಿದ್ದಾರೆ. ‘ಶಿವಣ್ಣ ನಿಮ್ ‘ಬೇಲ್’ ಲುಕ್ ಚೆನ್ನಾಗಿದೆ. ಕುರ್ಚಿ ಮೇಲೆ ಕುಳಿತಿರುವ ದೃಶ್ಯವೊಂದು ಇದೆ. ತುಂಬಾ ವರ್ಷಗಳ ಬಳಿಕ ರಾಜಕುಮಾರ್ ಸರ್ ಅವರನ್ನು ನೋಡಿದಂಗಾಯಿತು. ಈ ಮಾತು ಯಾವುದೇ ಮುಖಸ್ತುತಿಗೆ ಅಲ್ಲ. ಇದೇ ರೀತಿ ಹೆಚ್ಚು ಪಾತ್ರಗಳನ್ನು ಮಾಡಿ’ ಎಂದು ಶುಭ ಹಾರೈಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net