ಅಯ್ಯಪ್ಪಸ್ವಾಮಿಗೆ ಶಿವಣ್ಣ ಜೈಕಾರ : ಹಾಡಿಗೆ ಧ್ವನಿಯಾಗುವ ಮೂಲಕ ಭಕ್ತಿ ಅರ್ಪಿಸಿದ ಸ್ಯಾಂಡಲ್‌ವುಡ್ ನಟ

ಅಯ್ಯಪ್ಪ ಹಾಡಿನ ಪೋಸ್ಟರ್​
ಅಯ್ಯಪ್ಪ ಹಾಡಿನ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ‘ತತ್ವಮಸಿಯೇ ಅಯ್ಯಪ್ಪ ತತ್ವಮಸಿಯೇ’ ಭಕ್ತಿಪ್ರಧಾನ ಗೀತೆಗೆ ಧ್ವನಿಯಾದ ಶಿವಣ್ಣ
  • 20 ನಿಮಿಷದಲ್ಲಿ ಹಾಡಿನ ರೆಕಾರ್ಡಿಂಗ್ ಮುಗಿಸಿದ ನಟ
  • ವೀರ ರಚಿಸಿರುವ ಈ ಗೀತೆಗೆ ಲೋಕಿ ತವಸ್ಯ ಸಂಗೀತ ಸಂಯೋಜನೆ
ಬೆಂಗಳೂರು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಮೇಲೆ ಸ್ಯಾಂಡಲ್‌ವುಡ್ ದೊಡ್ಮನೆ ಕುಟುಂಬದವರು ಭಕ್ತಿ ಅಪಾರವಾದದು. ವರನಟ ಡಾ.ರಾಜಕುಮಾರ್ ಕಾಲದಿಂದ ಹಿಡಿದು ಇಂದಿಗೂ ದೊಡ್ಮನೆ ಕುಟುಂಬದವರು ಪ್ರತಿ ವರ್ಷ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ತೆರಳಿ ಭಕ್ತಿಯನ್ನು ಸಮರ್ಪಿಸುತ್ತಾರೆ. ಅಷ್ಟೇ ಅಲ್ಲದೇ ಮಾಲೆ ಧರಿಸಿ, ಹರಕೆ ಅರ್ಪಿಸುತ್ತಾರೆ. ಡಾ.ರಾಜಕುಮಾರ್, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಸೇರಿ ಇನ್ನು ಅನೇಕರು ಅಯ್ಯಪ್ಪ ಮಾಲೆ ಧರಿಸಿ, ಹರಕೆ ಸಲ್ಲಿಸಿದ್ದಾರೆ. ಅಯ್ಯಪ್ಪ ಸ್ವಾಮಿ ಮೇಲಿನ ದೊಡ್ಮನೆಯವರ ಭಕ್ತಿ ಇಷ್ಟಕ್ಕೆ ಸೀಮಿತವಾಗದೆ, ಶಬರಿಗಿರಿವಾಸನ ಮಹಿಮೆ ಸಾರುವ ಭಕ್ತಿ ಪ್ರಧಾನ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಈ ಹಿಂದೆ ಡಾ.ರಾಜಕುಮಾರ್, ಅಯ್ಯಪ್ಪ ಸ್ವಾಮಿ ಕುರಿತ ಅನೇಕ ಗೀತೆಗಳನ್ನು ಹಾಡಿ ಭಕ್ತಿ ಮೆರೆದಿದ್ದರು. ಇದೀಗ ಅವರ ಪುತ್ರ, ನಟ ಶಿವರಾಜಕುಮಾರ್ ಕೂಡ ಅದೇ ಹಾದಿಯಲ್ಲಿದ್ದು, ‘ತತ್ವಮಸಿಯೇ ಅಯ್ಯಪ್ಪ ತತ್ವಮಸಿಯೇ’ ಎಂಬ ಭಕ್ತಿ ಪ್ರಧಾನ ಗೀತೆಗೆ ಧ್ವನಿಯಾಗುವ ಮೂಲಕ ಭಕ್ತಿ ಅರ್ಪಿಸಿದ್ದಾರೆ. ವೀರ ರಚಿಸಿರುವ ಈ ಗೀತೆಗೆ ಲೋಕಿ ತವಸ್ಯ ಸಂಗೀತ ಸಂಯೋಜಿಸಿದ್ದಾರೆ. ಸುವರ್ಣ ಕರ್ನಾಟಕ ಧರ್ಮಶಾಸ್ತ್ರ ಅಯ್ಯಪ್ಪ ಮಂಡಳಿಯ ಗುರುಸ್ವಾಮಿ ನವೀನ್ ಶಕ್ತಿ ಹಾಗೂ ಮಂಡಳಿಯ ಅಯ್ಯಪ್ಪ ಭಕ್ತರ ಕೋರಿಕೆ ಮೇರೆಗೆ ಶಿವಣ್ಣ ಈ ಹಾಡಿಗೆ ಧ್ವನಿಯಾಗಿದ್ದಾರೆ.
"

ಈ ಹಾಡಿಗೆ ದೊಡ್ಮನೆ ಕುಟುಂಬದವರು ಹಾಡಿದರೆ ಚೆನ್ನಾಗಿರುತ್ತದೆ ಎಂದು ಶಿವರಾಜಕುಮಾರ್ ಅವರನ್ನು ಸಂಪರ್ಕಿಸಿದೆವು. ಅಯ್ಯಪ್ಪ ಸ್ವಾಮಿ ಎಂದ ಕೂಡಲೇ ಅವರು ಒಪ್ಪಿಗೆ ಸೂಚಿಸಿ, ಟ್ಯೂನ್, ಸಾಹಿತ್ಯ ಕಳುಹಿಸಿಕೊಡುವಂತೆ ಕೇಳಿದರು. ಪೂರ್ವಸಿದ್ಧರಾಗಿ ಬಂದಿದ್ದ ಅವರು, ಸ್ಟುಡಿಯೋದಲ್ಲಿ ಕೊರಳಿನ ರುದ್ರಾಕ್ಷಿಗೆ ನಮಸ್ಕರಿಸಿ ಕೇವಲ 20 ನಿಮಿಷದಲ್ಲಿ ಹಾಡಿ ಮುಗಿಸಿದರು.

— | ನವೀನ್ ಶಕ್ತಿ, ಗುರುಸ್ವಾಮಿ, ಸುವರ್ಣ ಕರ್ನಾಟಕ ಧರ್ಮಶಾಸ್ತ್ರ ಅಯ್ಯಪ್ಪ ಮಂಡಳ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net