ಪರಿಸರ ದಿನ ಒಂದು ದಿನವಲ್ಲ, ಪ್ರತಿ ದಿನದ ಆಚರಣೆಯಾಗಲಿ. ಮೊದಲಿನಿಂದಲೂ ಪರಿಸರ ಪರ ಕಾಳಜಿ ವಹಿಸುತ್ತ ಬಂದಿದ್ದೇನೆ. ನನ್ನ ಬರಹ, ನಾಟಕ, ಸಿನಿಮಾ ಯಾವುದೇ ಮಾಧ್ಯಮವಾಗಲಿ ಪರಿಸರ ಜಾಗೃತಿ ಮೂಡಿಸುತ್ತ ಬಂದಿದ್ದೇನೆ. ನಮ್ಮಿಂದಲೇ ಆರಂಭವಾದಾಗ ಅದು ಆಂದೋಲನವಾಗಲು ಸಾಧ್ಯ. ಎರಡು ವರ್ಷದ ಹಿಂದೆ ‘ಹೌ ಡೇರ್ ಯು?’ ನಾಟಕದಲ್ಲಿಯೂ ಪರಿಸರ ಸಂರಕ್ಷಣೆಯ ಮೇಲೆ ಬೆಳಕು ಚೆಲ್ಲಿದ್ದೆ. ಮೊದಲು ವೈಯಕ್ತಿಕವಾಗಿ ನಾವು ಆಹಾರ ಪೋಲು ಮಾಡುವುದು, ಮರ-ಗಿಡಗಳನ್ನು ಕಡಿಯುವುದನ್ನು ನಿಲ್ಲಿಸಬೇಕು. ಹಳ್ಳಿಯಲ್ಲಿ ದಿನಕ್ಕೆ ಹತ್ತು ಕುಟುಂಬಗಳು ಬಳಸುವ ನೀರನ್ನು ನಗರಗಳಲ್ಲಿ ಒಂದೇ ಕುಟುಂಬ ಬಳಸುತ್ತದೆ. ನೀರಿದೆ ಎಂದು ಖರ್ಚು ಮಾಡುವುದಲ್ಲ. ಸಾಧ್ಯವಾದಷ್ಟು ನಾವು ಜಲಸಂರಕ್ಷಣೆಯತ್ತ ಗಮನ ಹರಿಸಬೇಕು. ರೈತಪರ ಕಾಳಜಿ ಹೊಂದುವುದೇ ನಿಜವಾದ ಪರಿಸರ ಪ್ರೇಮ. ನಮ್ಮ ಕೃಷಿ ಮೂಲಗಳನ್ನು ನಾವು ಉಳಿಸಬೇಕು. ಪ್ರವಾಸದ ನೆಪದಲ್ಲಿ ಪಾರಂಪರಿಕ ಹಸಿರು ತಾಣಗಳನ್ನು ಹಾಳು ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಬಾಟಲ್‌ಗಳನ್ನು ಬೀಸಾಡಲಾಗುತ್ತದೆ. ಅದರಿಂದ ಅಲ್ಲಿನ ಸೌಂದರ್ಯ ಹಾಳುಗೆಡುವುತ್ತಿದ್ದಾರೆ. ಇಂತಹ ವಿಕೃತಿಯನ್ನು ಮೊದಲು ನಿಲ್ಲಿಸಬೇಕು. ನಮ್ಮ ಮನೆಯಲ್ಲಿ ಶೇ.90ರಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದಿಲ್ಲ. ಅನಿವಾರ್ಯವಾಗಿ ಕೆಲವೊಂದನ್ನು ಬಳಸುತ್ತೇವೆ ಬಿಟ್ಟರೆ, ಮನೆಯಲ್ಲಿ ಕಂಚು, ಸ್ಟೀಲ್ ಸೇರಿ ಮಣ್ಣಿನಿಂದ ಮಾಡಿದ ವಸ್ತುಗಳೇ ಹೆಚ್ಚು.