ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಶರ್ಮಿಳಾ ಮಾಂಡ್ರೆ: ಯಾರು ಈ ಸುಧನ್ ಸುಂದರಂ? Sharmiela Mandre

ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಶರ್ಮಿಳಾ ಮಾಂಡ್ರೆ: ಯಾರು ಈ ಸುಧನ್ ಸುಂದರಂ? Sharmiela Mandre
ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಶರ್ಮಿಳಾ ಮಾಂಡ್ರೆ: ಯಾರು ಈ ಸುಧನ್ ಸುಂದರಂ? Sharmiela Mandre
Published on

ಪ್ರಮುಖ ಮುಖ್ಯಾಂಶಗಳು

  • ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ
  • ತಮಿಳು ಚಿತ್ರರಂಗದ ಖ್ಯಾತ ಯುವ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವಿವಾಹ
  • ಇದೇ ಜೂನ್ 25 ರಂದು ಅತ್ಯಂತ ಅದ್ಧೂರಿಯಾಗಿ ನೆರವೇರಲಿದೆ ಇಬ್ಬರ ನಿಶ್ಚಿತಾರ್ಥ
  • ವಿಜಯ್ ಸೇತುಪತಿ ನಟನೆಯ 'ಮಹಾರಾಜ' ಸಿನಿಮಾದ ನಿರ್ಮಾಪಕ ಈ ಸುಧನ್ ಸುಂದರಂ
Sharmiela Mandre : ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಅವರು ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 
ತಮಿಳು ಚಿತ್ರರಂಗದ ಖ್ಯಾತ ಯುವ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ಶರ್ಮಿಳಾ ಮಾಂಡ್ರೆ ಸಪ್ತಪದಿ ತುಳಿಯಲಿದ್ದಾರೆ ಎಂಬ ಬಿಗ್ ನ್ಯೂಸ್ ಸದ್ಯ ಸ್ಯಾಂಡಲ್‌ವುಡ್ ಹಾಗೂ ಕಾಲಿವುಡ್ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇವರಿಬ್ಬರ ಮದುವೆಯ ಮೊದಲ ಹೆಜ್ಜೆಯಾಗಿ ಇದೇ ಜೂನ್ 25 ರಂದು ಅತ್ಯಂತ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಲಿದೆ. ತೀರಾ ಆಪ್ತವಾಗಿ ನಡೆಯಲಿರುವ ಈ ನಿಶ್ಚಿತಾರ್ಥ ಸಮಾರಂಭದಲ್ಲಿ ಉಭಯ ಕುಟುಂಬಗಳ ಸದಸ್ಯರು, ನಿಕಟ ಸಂಬಂಧಿಗಳು ಹಾಗೂ ಚಿತ್ರರಂಗದ ಕೆಲವೇ ಕೆಲವು ಗಣ್ಯರು ಮಾತ್ರ ಭಾಗವಹಿಸಿ ಜೋಡಿಗೆ ಶುಭ ಹಾರೈಸಲಿದ್ದಾರೆ ಎಂದು ತಿಳಿದುಬಂದಿದೆ.
ಶರ್ಮಿಳಾ ಮಾಂಡ್ರೆ ಕೈಹಿಡಿಯಲಿರುವ ಸುಧನ್ ಸುಂದರಂ ತಮಿಳು ಸಿನಿರಂಗದ ಯಶಸ್ವಿ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ವಿಜಯ್ ಸೇತುಪತಿ ನಟನೆಯ 'ಮಹಾರಾಜ', ವಿಮರ್ಶಕರ ಪ್ರಶಂಸೆ ಪಡೆದ 'ಪಾರ್ಕಿಂಗ್' ಸೇರಿದಂತೆ 'ತಾಯ್ ಕೆಳವಿ', 'ರಿವಲ್ವಾರ್ ರೀಟಾ' ಮತ್ತು 'ಆಸೈ' ನಂತಹ ಹಲವು ಹಿಟ್ ಸಿನಿಮಾಗಳನ್ನು ಇವರು ನಿರ್ಮಿಸಿದ್ದಾರೆ. ಸುಧನ್ ಅವರು ಪ್ಯಾಷನ್ ಸ್ಟುಡಿಯೋಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದು, ಸಿನಿಮಾ ನಿರ್ಮಾಣ ಮತ್ತು ವಿತರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಶರ್ಮಿಲಾ ಮಾಂಡ್ರೆ ಹಾಗೂ ಸುಧನ್​ ಸುಂದರಂ ಚಿತ್ರರಂಗದ ಹಿನ್ನೆಲೆಯವರೇ ಆಗಿರುವುದರಿಂದ, ಈ ಸ್ಟಾರ್ ಜೋಡಿಯ ಹೊಸ ಬಾಳಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಮಿತ್ರರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇನ್ನೂ ಶರ್ಮಿಳಾ ಮಾಂಡ್ರೆ ಸಿನಿಮಾ ವಿಚಾರಕ್ಕೆ ಬರುವುದಾದರೆ, 2007ರಲ್ಲಿ ತೆರೆಕಂಡ 'ಸಜನಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶರ್ಮಿಳಾ ಮಾಂಡ್ರೆ, ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳಿನ ಹಲವು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕೇವಲ ನಟನೆಗಷ್ಟೇ ಸೀಮಿತವಾಗದೆ ಯಶಸ್ವಿ ನಿರ್ಮಾಪಕಿಯಾಗಿಯೂ ಸಿನಿರಂಗದಲ್ಲಿ ಸಕ್ರಿಯರಾಗಿರುವ ಇವರು, ಈಗಾಗಲೇ ತಮಿಳಿನಲ್ಲಿ ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಅಭಿನಯದ ಜೊತೆಗೆ ಬಂಡವಾಳವನ್ನೂ ಹೂಡುತ್ತಿರುವ ಶರ್ಮಿಳಾ ಮಾಂಡ್ರೆ, ಪ್ರಸ್ತುತ ಕನ್ನಡದಲ್ಲಿ 'ದಸರಾ' ಹಾಗೂ ತಮಿಳಿನಲ್ಲಿ 'ಅದೃಷ್ಟಶಾಲಿ' ಮತ್ತು 'ಕಾದಲ್ ಕೊಂಜಂ ತೂಕಲಾ' ಚಿತ್ರಗಳ ನಟನೆ ಹಾಗೂ ನಿರ್ಮಾಣದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net