ಬೆಂಗಳೂರು: ಕನ್ನಡ ಚಿತ್ರರಂಗ ಯಾವುದಾದರೂ ಸ್ಟಾರ್ ಒಬ್ಬರ ಕಮ್‌ಬ್ಯಾಕ್‌ಗೆ ಕಾಯುತ್ತಿದೆ ಎಂದರೆ ಅದು ಒನ್ ಆ್ಯಂಡ್ ಓನ್ಲಿ ನಟಿ ರಮ್ಯಾ. ಹೌದು, 2016ರಲ್ಲಿ ತೆರೆಕಂಡ ‘ನಾಗರಹಾವು’ ಬಳಿಕ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾದ ಕಾರಣ ರಮ್ಯಾ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದರು. ಕಳೆದ ಐದಾರು ವರ್ಷಗಳಿಂದ ಅವರು ಚಿತ್ರರಂಗಕ್ಕೆ ಮರಳುತ್ತಾರೆ ಎಂಬ ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇದೆ. ‘ಇಬ್ಬನಿ ತಬ್ಬಿದ ಇಳೆಯಲಿ’ ಮೂಲಕ ರಮ್ಯಾ ರೀ-ಎಂಟ್ರಿ ಪಕ್ಕಾ ಎನ್ನಲಾಗಿತ್ತು. ಸಿನಿಮಾ ಪ್ರಾರಂಭದಲ್ಲಿ ಖುದ್ದು ಅವರೇ ಆ ಬಗ್ಗೆ ಇಂಟರೆಸ್ಸಟ್ ತೋರಿಸಿದ್ದರು. ಆದರೆ, ದಿನಕಳೆದಂತೆ ಕೇವಲ ನಿರ್ಮಾಣಕ್ಕಷ್ಟೇ ಸೀಮಿತವಾದರು. ಬಳಿಕ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರಾದರೂ, ಅದು ವಿವಾದದ ರೂಪ ಪಡೆದು ಕೋರ್ಟ್ ಮೆಟ್ಟೆಲೇರಿತ್ತು. ಇವೆಲ್ಲದರ ಮಧ್ಯೆ, ಧನಂಜಯ್, ಶಿವರಾಜಕುಮಾರ್ ಅಭಿನಯದ ‘ಉತ್ತರಕಾಂಡ’ ಮೂಲಕ ಮತ್ತೆ ರಮ್ಯಾ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ಘೋಷಣೆಯಾಗಿತ್ತು. ಅದಕ್ಕೆ ಪೂರಕ ಎಂಬಂತೆ ರಮ್ಯಾ ಚಿತ್ರದ ಮುಹೂರ್ತದಲ್ಲೂ ಭಾಗವಹಿಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ಅವರು ಆ ಪ್ರಾಜೆಕ್ಟ್‌ನಿಂದಲೂ ಹಿಂದೆ ಸರಿದರು. ಹೀಗಾಗಿ ರಮ್ಯಾ ಮತ್ತೆ ತೆರೆಗೆ ಯಾವಾಗ ಮರಳಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇತ್ತು. ಶನಿವಾರ 43ನೇ ಹುಟ್ಟುಹಬ್ಬದ ಸಂಭ್ರಮದ ನಡುವೆ ರಮ್ಯಾ ಸಿಹಿ ಸುದ್ದಿ ನೀಡಿದ್ದಾರೆ. ‘ಚಿತ್ರರಂಗಕ್ಕೆ ಮರಳುತ್ತಿದ್ದೇನೆ’ ಎಂದು ಖಚಿತಪಡಿಸಿದ್ದಾರೆ. ಇತ್ತೀಚೆಗೆ ಹುಟ್ಟುಹಬ್ಬದ ಕುರಿತಂತೆ ರಮ್ಯಾ, ‘ಬರ್ತ್‌ಡೇ ಬಗ್ಗೆ ಹೆಚ್ಚು ಆಸಕ್ತಿ ವಹಿಸಲು ನಾನು 18, 19 ವರ್ಷದವಳಲ್ಲ. ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ. ಒಮ್ಮೊಮ್ಮೆ ಯಾಕಪ್ಪಾ ಈ ಬರ್ತ್‌ಡೇ ಬರುತ್ತದೆ ಅಂತನಿಸುತ್ತದೆ. ಆದರೆ ಹುಟ್ಟುಹಬ್ಬದ ಬಗ್ಗೆ ಖುಷಿಯಿದೆ’ ಎಂದು ಹಂಚಿಕೊಂಡಿದ್ದಾರೆ.