

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ‘ಗಂಟುಮೂಟೆ’ (2019) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನಸೆಳೆದ ನಿರ್ದೇಶಕಿ ರೂಪಾ ರಾವ್. ಇದೀಗ ಅವರು ಏಳು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದು, ಹೊಸ ಬಗೆಯ ಕಥೆಗೆ ಆ್ಯಕ್ಷನ್-ಹೇಳುವ ಸಂಭ್ರಮದಲ್ಲಿದ್ದಾರೆ. ರೂಪಾ ರಾವ್ ಹೊಸ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ ಎಂಬುದನ್ನು ಈಗಾಗಲೇ ಘೋಷಿಸಲಾಗಿತ್ತು. ಇದೀಗ ಮೋಷನ್ ಪೋಸ್ಟರ್ ಮೂಲಕ ಸಿನಿಮಾ ಟೈಟಲ್ ಘೋಷಣೆಯಾಗಿದ್ದು, ಚಿತ್ರಕ್ಕೆ ‘ಭಯಂಕರ ಪ್ರೀತಿ’ ಎಂದು ಹೆಸರಿಡಲಾಗಿದೆ. ಇದೊಂದು ಸೂಕ್ಷ್ಮ ಸಂದೇಶ ಸಾರುವ ಕಥೆಯಾಗಿದೆ ಎಂಬುದನ್ನು ಚಿತ್ರದ ಶೀರ್ಷಿಕೆ ಸ್ಪಷ್ಟಪಡಿಸುತ್ತದೆ. ಇಲ್ಲಿ ತೇಜು ಬೆಳವಾಡಿ ಮತ್ತು ಪ್ರಣವ್ ಶ್ರೀಧರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ‘ಗಂಟುಮೂಟೆ’ ಬಳಿಕ ತೇಜು ಮತ್ತು ರೂಪಾ ಮತ್ತೆ ಒಂದಾಗಿದ್ದಾರೆ. ಕಲಾವಿದರಾದ ಅಶಿತ್, ಅನನ್ಯಾ ಮೋಹನ್, ವಿನಯ್ ಭಾರದ್ವಾಜ್, ಶೀತಲ್ ರಾವ್, ಸುಧಾ ಪ್ರಸಾದ್, ಅನಘಾ, ಚಂದ್ರಶೇಖರ್, ಪೃಥ್ವಿ ಬನವಾಸಿ, ರಾಮ್ ಮಂಜುನಾಥ್ ಕಲಾಬಳಗದಲ್ಲಿದ್ದಾರೆ. ಶಿಬಿ ಶ್ರೀನಿವಾಸ್ ಸಂಗೀತ, ಪ್ರದೀಪ್ ನಾಯಕ್ ಸಂಕಲನ ಚಿತ್ರಕ್ಕಿದೆ. ಸದ್ಯ ಸಿನಿಮಾ ಘೋಷಿಸಿರುವ ತಂಡ ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ವಿಚಾರಗಳನ್ನು ಬಹಿರಂಗಪಡಿಸಲಿದೆ.