ಭಾರತ ಕಂಡ ಶ್ರೇಷ್ಠ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂದು ಕೆಲ ದಿನಗಳ ಹಿಂದಷ್ಟೇ ಸುದ್ದಿಯಾಗಿತ್ತು. ಇದೀಗ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜಯಂತಿಯಾದ ಬುಧವಾರ (ಸೆ. 16) ಸಿನಿಮಾ ಲಾಂಚ್ ಮಾಡಲಾಗಿದ್ದು, ನಟ ಕಮಲ್ ಹಾಸನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. "ಮಲ್ಲಿ ರಾವಾ', "ಕಿಂಗ್ಡಮ್' ಸೇರಿ ರಾಷ್ಟ್ರಪ್ರಶಸ್ತಿ ವಿಜೇತ "ಜೆರ್ಸಿ' ನಿರ್ದೇಶಿಸಿರುವ ಗೌತಮ್ ತಿನ್ನನೂರಿ ಈ ಬಯೋಪಿಕ್ಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಚಿತ್ರದ ಬಗ್ಗೆ ಗೌತಮ್, "ಈ ಸಿನಿಮಾ ಪ್ರಾರಂಭಿಸಿದಾಗ, ನಾವು ಭಾರತದ ಶ್ರೇಷ್ಠ ಸಂಗೀತ ದಿಗ್ಗಜರೊಬ್ಬರ ಕುರಿತ ಸಿನಿಮಾ ರೂಪಿಸುತ್ತಿದ್ದೇವೆ ಎಂದು ಭಾವಿಸಿದ್ದೆವು. ಆದರೆ, ಅವರ ಜೀವನದ ಕುರಿತು ರೀಸರ್ಚ್ ಮಾಡಿದಾಗ, ಅವರು ಶ್ರೇಷ್ಠ ಗಾಯಕಿ ಮಾತ್ರವಲ್ಲ, ಹಲವು ತ್ಯಾಗಗಳನ್ನು ಮಾಡಿದ್ದಾರೆ ಎಂಬುದು ಗೊತ್ತಾಯಿತು' ಎಂದು ಹೇಳಿಕೊಂಡರು. ಅಲ್ಲು ಅರ್ಜುನ್, ಬನ್ನಿ ವಾಸ್ ಜತೆ ಕನ್ನಡ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಈ ಬಯೋಪಿಕ್ ನಿರ್ಮಾಣವ ಜವಾಬ್ದಾರಿ ಹೊತ್ತಿದ್ದು, "ಈ ಸಿನಿಮಾ ನಮ್ಮೆಲ್ಲರ ಹಲವು ವರ್ಷಗಳ ಕನಸು. ಈ ಯೋಜನೆಯ ಹಿಂದೆ ಏಳೆಂಟು ವರ್ಷಗಳ ಪರಿಶ್ರಮ ಮತ್ತು ರೀಸರ್ಚ್ ಅಡಗಿದೆ' ಎಂದರು.