Nirup Bhandari - ನಿರೂಪ್​ ನಾನಾ ರೂಪ

Nirup Bhandari
Nirup Bhandari
Published on
Nirup Bhandari -
"ರಂಗಿತರಂಗ' ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿರುವ ನಿರೂಪ್​ ಭಂಡಾರಿ "ರಾಜರಥ', "ಆದಿ ಲಕ್ಷ್ಮೀ ಪುರಾಣ', "ವಿಂಡೋ ಸೀಟ್​' ಚಿತ್ರಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. 11 ವರ್ಷಗಳ ಕರಿಯರ್​ನಲ್ಲಿ ಕೇವಲ ನಾಲ್ಕು ಸಿನಿಮಾಗಳಲ್ಲಷ್ಟೇ ನಾಯಕನಾಗಿ ನಟಿಸಿದ್ದರೂ, ಕುಟುಂಬ ಪ್ರಧಾನ ಕಂಟೆಂಟ್​ ಮೂಲಕ ಕೌಟುಂಬಿಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. "ವಿಂಡೋ ಸೀಟ್​' (2022) ಬಳಿಕ ನಿರೂಪ್​ ನಾಯಕನಾಗಿರುವ ಸಿನಿಮಾ ತೆರೆಗೆ ಬಂದಿಲ್ಲ. ಬದಲಾಗಿ "ವಿಕ್ರಾಂತ್​ ರೋಣ'ದಲ್ಲಿ ವಿಲನ್​, "ಎಡಗೈಯೇ ಅಪಘಾತಕ್ಕೆ ಕಾರಣ'ದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗಂತ ಅವರು ಹೀರೋ ಆಗಿ ನಟಿಸುತ್ತಿಲ್ಲ ಅಂತಲ್ಲ. ಬದಲಾಗಿ ನಿರೂಪ್​ ಸದ್ಯ ಐದು ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿದ್ದು, ಈ ವರ್ಷ ಎರಡು ಸಿನಿಮಾಗಳು ತೆರೆಗೆ ಬರಲಿವೆ. ಅದರಲ್ಲೊಂದು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಆ್ಯಕ್ಷನ್​-ಕಟ್​ ಹೇಳಿರುವ ನಿರೂಪ್​ ಜತೆ ಪೃಥ್ವಿ ಅಂಬಾರ್​, ಶಾನ್ವಿ ಶ್ರೀವಾಸ್ತವ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಅಮೆರಿಕ ಅಮೆರಿಕ 2'. ಇದೇ ಸೆ.11ರಂದು ತೆರೆಗೆ ಬರಲಿವ ಈ ಹಿಟ್​ ಚಿತ್ರದ ಸೀಕ್ವೆಲ್​ ಬಗ್ಗೆ, "ನಾನು ಬೇಕೆಂದೇ ಯಾವ ಚಿತ್ರಕ್ಕೂ ಸಮಯ ತೆಗೆದುಕೊಳ್ಳುತ್ತಿಲ್ಲ. ಕಾರಣಾಂತರಗಳಿಂದ ಹಾಗಾಗುತ್ತಿದೆಯಷ್ಟೇ. ಈಗಿನ ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ಮಾಡುವುದು ಸರಳ, ರಿಲೀಸ್​ ಮಾಡುವುದೇ ಸವಾಲು. "ರಂಗಿತರಂಗ' ಎರಡು ವರ್ಷ ಬೇಕಾಗಿತ್ತು. "ರಾಜರಥ' ಸಮಯದಲ್ಲಿ ನೋಟ್​ ಬ್ಯಾನ್​ ಆಗಿತ್ತು. ಇನ್ನು ನಾಗತಿಹಳ್ಳಿ ಸರ್​ 2022ರಲ್ಲಿ "ಅಮೆರಿಕ ಅಮೆರಿಕ 2' ಕಥೆ ಹೇಳಿದರು. ಹಾಗಂತ ಇದುವರೆಗೆ ಕನ್ನಡ ಮಾತ್ರವಲ್ಲ ಬೇರೆ ಭಾಷೆಗಳಲ್ಲೂ ಈ ವಿಷಯವನ್ನು ಯಾರೂ ಟಚ್​ ಮಾಡಿಲ್ಲ' ಎಂದು ಹೇಳಿಕೊಳ್ಳುತ್ತಾರೆ ನಿರೂಪ್​.

ಫಾಸ್ಟ್​ ಫುಡ್​ ಅಲ್ಲ ಆರೋಗ್ಯಕರ ಬಾಳೆಎಲೆ ಊಟ!

"ಫಾಸ್ಟ್​ ಫುಡ್​ ರೀತಿ ಯಾವ ರೀತಿಯ ಸಿನಿಮಾಗಳು ವರ್ಕ್​ ಆಗುತ್ತಿವೆ ಅಂತ ನೋಡಿಕೊಂಡು ಅದೇ ರೀತಿಯ ಸಿನಿಮಾ ಮಾಡುವುದು ಇತ್ತೀಚೆಗೆ ಕಾಮನ್​ ಆಗಿದೆ. ಹೀಗಾಗಿ ಫ್ಯಾಮಿಲಿ ಆಡಿಯನ್ಸ್​ಗೆ ಕನೆಕ್ಟ್​ ಆಗುವ ಚಿತ್ರಗಳು ಇತ್ತೀಚೆಗೆ ಕಡಿಮೆಯಾಗಿವೆ' ಎನ್ನುವ ನಿರೂಪ್​, ""ರಂಗಿತರಂಗ' ರಿಲೀಸ್​ ಸಮಯದಲ್ಲಿ "ನಾವು ರಾಜಕುಮಾರ್​ ಸಿನಿಮಾನೇ ಕೊನೆಯದಾಗಿ ನೋಡಿದ್ದು', "25 ವರ್ಷಗಳ ಬಳಿಕ ಮತ್ತೆ ಥಿಯೇಟರ್​ಗೆ ಬಂದಿದ್ದೇವೆ' ಅಂತೆಲ್ಲ ಪ್ರೇಕ್ಷಕರು ಹೇಳುತ್ತಿದ್ದರು. ಅಂತಹ ಫ್ಯಾಮಿಲಿ ಆಡಿಯನ್ಸ್​ಗೆ ಹೆಚ್ಚು ಕನೆಕ್ಟ್​ ಆಗುವ ಚಿತ್ರವಿದು. ಪ್ರತಿ ಕುಟುಂಬಗಳೂ ನೋಡಲೇಬೇಕಾದ ಸಿನಿಮಾ' ಎನ್ನುತ್ತಾರೆ.

"ಬಿಆರ್​ಬಿ'ಯಲ್ಲಿ ನಾನಿಲ್ಲ

ಸಾಮಾನ್ಯವಾಗಿ ಅಣ್ಣ ಅನೂಪ್​ ಭಂಡಾರಿ ನಿರ್ದೇಶನದ ಚಿತ್ರಗಳಲ್ಲಿ ನಿರೂಪ್​ ಕೂಡ ನಟಿಸಿದ್ದಾರೆ. ಆದರೆ, "ಬಿಲ್ಲ ರಂಗ ಬಾಷಾ'ದಲ್ಲಿ ಇದೇ ಮೊದಲ ಬಾರಿಗೆ ನಿರೂಪ್​ ಅಣ್ಣನ ಚಿತ್ರದಲ್ಲಿ ನಟಿಸುತ್ತಿಲ್ಲವಂತೆ. "2018ರಿಂದಲೂ ಕಥೆ ಡಿಸ್ಕಷನ್​ನಲ್ಲಿ ನಾನು ಕೂರುತ್ತಿದ್ದೆ. ಆದರೆ, ನಾನು ನನ್ನ ಸಿನಿಮಾಗಳಲ್ಲಿ ಬಿಜಿಯಿರುವ ಕಾರಣ "ಬಿಲ್ಲ ರಂಗ ಬಾಷಾ'ದಲ್ಲಿ ನಟಿಸುವುದಿರಲಿ, ಸೆಟ್​ಗೂ ಹೋಗಲಾಗುತ್ತಿಲ್ಲ. ಇದುವರೆಗೆ ಕೇವಲ ಒಂದು ದಿನ ಮಾತ್ರ ಹೋಗಿದ್ದೇನೆ' ಎನ್ನುತ್ತಾರೆ. "ಅಮೆರಿಕ ಅಮೆರಿಕ 2' ಬೆನ್ನಲ್ಲೇ "ಸತ್ಯ ಸನ್​ ಆ್​ ಹರಿಶ್ಚಂದ್ರ' ಇದೇ ವರ್ಷ ರಿಲೀಸ್​ ಆಗಲಿದೆ. ಜತೆಗೆ "ಅತಿಕಾಯ' ಸೇರಿ ಇನ್ನೂ ಎರಡು ಚಿತ್ರಗಳಲ್ಲಿ ನಿರೂಪ್​ ನಟಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net