The Task Review; ಸಿರಿಯ ಹುಡುಕಾಟದಲ್ಲಿ ಕಡುಸತ್ಯಗಳ ಅನಾವರಣ

ದ ಟಾಸ್ಕ್​
ದ ಟಾಸ್ಕ್​
Published on

ಪ್ರಮುಖ ಮುಖ್ಯಾಂಶಗಳು

  • ರಾಘು ಶಿವಮೊಗ್ಗ "ದ ಟಾಸ್ಕ್​' ಮೂಲಕ ಒಂದೊಳ್ಳೆ ಆ್ಯಕ್ಷನ್​ ಥ್ರಿಲ್ಲರ್​ ಡ್ರಾಮಾ ನಿರೂಪಿಸಿದ್ದಾರೆ.
  • ಜಯಸೂರ್ಯ ಮತ್ತು ಸಾಗರ್​ ಆ್ಯಕ್ಷನ್​ನಲ್ಲಿ ಮಿಂಚಿದ್ದಾರೆ
  • ಜೂಡಾ ಸ್ಯಾಂಡಿ ಸಂಗೀತದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸುತ್ತದೆ.
  • ಈ ವಾರದ ರೊಮ್ಯಾಂಟಿಕ್​ ಕಾಮಿಡಿಗಳ ಅಬ್ಬರದ ನಡುವೆ ಆ್ಯಕ್ಷನ್​ ಪ್ರಿಯರಿಗೆ "ದ ಟಾಸ್ಕ್​' ಉತ್ತಮ ಆಯ್ಕೆ.
The Task ; ಚಿತ್ರ: ದ ಟಾಸ್ಕ್​
ನಿರ್ದೇಶನ: ರಾಘು ಶಿವಮೊಗ್ಗ
ತಾರಾಗಣ: ಜಯಸೂರ್ಯ ಆಜಾದ್​, ಸಾಗರ್​ ರಾಮ್​, ರಾಘು, ಶ್ರೀಲಕ್ಷ್ಮೀ, ಅಚ್ಯುತ್​, ಸಂಗೀತಾ, ಅರವಿಂದ್​ ಮತ್ತಿತರರು
ಬೆಂಗಳೂರಿಗೆ ಓದಲು ಬಂದ ಸೋದರ ಸಂಬಂಧಿಗಳಾದ ವಿಷ್ಣು (ಸಾಗರ್​) ಮತ್ತು ಕಂಠಿ (ಜಯಸೂರ್ಯ) ಹಾಸ್ಟೆಲ್​ ವಾರ್ಡನನ್ನೇ ಕೊಂದು ಬಾಲಾಪರಾಧಿ ಕೇಂದ್ರ ಸೇರುತ್ತಾರೆ. ಸಮಾಜಕ್ಕೆ ಬೇಡವಾದ ಹುಡುಗರಿಗೆ ಅಲ್ಲಿ ನಿವೃತ್ತ ಪೊಲೀಸ್​ ಅಧಿಕಾರಿ ರಾಜೇಶ್​ (ಅಚ್ಯುತ್​) ಆಸರೆಯಾಗುತ್ತಾರೆ. ಒಳ್ಳೆಯ ದಾರಿಯಲ್ಲಿ ನಡೆದು, ಮತ್ತೆ ಸಮಾಜದಲ್ಲಿ ತಲೆಯೆತ್ತಿ ಬದುಕುವ ಆಸೆ ಈ ಯುವಕರದು. ಅದರ ನಡುವೆಯೇ ಮಡಿಕೇರಿಯಲ್ಲಿ ಸಿರಿ (ಶ್ರೀಲಕ್ಷ್ಮೀ) ಎಂಬ ಬಾಲಕಿಯ ಅಪಹರಣವಾಗುತ್ತದೆ. ಆಕೆಯನ್ನು ಆಕೆಯ ಕುಟುಂಬದವರು, ಸಂಬಂಧಿಕರು ಮಾತ್ರವಲ್ಲದೇ ಪೊಲೀಸರು, ಸ್ಥಳಿಯ ರೌಡಿ ಭರಮಣ್ಣ (ರಾಘು), ಸಂಜೀವಿನಿ ಆಸ್ಪತ್ರೆಯ ಮಾಲೀಕ ಸೂರ್ಯಪ್ರಕಾಶ್​ (ಬಾಲಾಜಿ ಮನೋಹರ್​) ಜತೆಗೆ ವಿಷ್ಣು ಮತ್ತು ಕಂಠಿ ಕೂಡ ಹುಡುಕತೊಡಗುತ್ತಾರೆ. ಆ ಹುಡುಕಾಟದಲ್ಲಿ ಹಲವು ಸತ್ಯಗಳ ಅನಾವರಣವಾಗುತ್ತದೆ. ಆಕೆಯ ಕಿಡ್ನ್ಯಾಪ್​ಗೆ ಕಾರಣವೇನು? ಅದಕ್ಕೂ ಆಕೆಯನ್ನು ಹುಡುಕುತ್ತಿರುವ ಪೊಲೀಸರು, ರೌಡಿಗಳಿಗೂ ಏನು ಸಂಬಂಧ? ಈ ಎಲ್ಲ ಪ್ರಶ್ನೆಗಳ ಕುತೂಹಲಕಾರಿ ಪಯಣವೇ "ದ ಟಾಸ್ಕ್​'.
ರಾಘು ಶಿವಮೊಗ್ಗ "ದ ಟಾಸ್ಕ್​' ಮೂಲಕ ಒಂದೊಳ್ಳೆ ಆ್ಯಕ್ಷನ್​ ಥ್ರಿಲ್ಲರ್​ ಡ್ರಾಮಾ ನಿರೂಪಿಸಿದ್ದಾರೆ. 135 ನಿಮಿಷಗಳ ಕಥೆಯು ಪ್ರಾರಂಭದಲ್ಲಿ ನಿಧಾನವೆನಿಸಿದರೂ, ಸಾಗಿದಂತೆ ಮುಂದೇನು ಎಂಬ ಕುತೂಹಲದೊಂದಿಗೆ ಪ್ರೇಕ್ಷಕರನ್ನು ಸೀಟಂಚಲ್ಲಿ ಕೂರಿಸುತ್ತದೆ. ಗಂಭೀರವಾಗಿ ಸಾಗುವ ಕಥೆಯಲ್ಲಿ ನಿರೀಸದೇ ಬಂದು ಹೋಗುವ ಒನ್​ಲೈನರ್​ಗಳು ಅಲ್ಲಲ್ಲಿ ನಗಿಸುತ್ತವೆ. ನಾಯಕರಾಗಿ ಪದಾರ್ಪಣೆ ಮಾಡಿರುವ ಜಯಸೂರ್ಯ ಮತ್ತು ಸಾಗರ್​ ಆ್ಯಕ್ಷನ್​ನಲ್ಲಿ ಮಿಂಚಿದ್ದಾರೆ. ಬಾಡಿ ಲಾಂಗ್ವೇಜ್​, ಡೈಲಾಗ್​ ಡೆಲಿವರಿಯಲ್ಲೂ ಇಷ್ಟವಾಗುತ್ತಾರೆ. ನಟನೆಯಲ್ಲಿ ಇನ್ನಷ್ಟು ಪಕ್ವವಾದರೆ ಚಿತ್ರರಂಗದಲ್ಲಿ ಇಬ್ಬರಿಗೂ ಉತ್ತಮ ಭವಿಷ್ಯವಿದೆ. ಸಿರಿ ಪಾತ್ರದಲ್ಲಿ ಶ್ರೀಲಕ್ಷ್ಮೀ ಗಮನ ಸೆಳೆಯುತ್ತಾರೆ. ಭರಮಣ್ಣನಾಗಿ ಖುದ್ದು ರಾಘು ಅಬ್ಬರಿಸಿದ್ದಾರೆ. ಉಳಿದಂತೆ ಸಂಗೀತಾ ಭಟ್​, ಅಚ್ಯುತ್​ ಕುಮಾರ್​, ಗೋಪಾಲಕೃಷ್ಣ ದೇಶಪಾಂಡೆ, ಭರತ್​, ಬಾಲಾಜಿ ಮನೋಹರ್​ ಸೇರಿ ಎಲ್ಲ ಪಾತ್ರಗಳೂ ಅಚ್ಚುಕಟ್ಟಾಗಿ ಮೂಡಿಬಂದಿವೆ. ಜೂಡಾ ಸ್ಯಾಂಡಿ ಸಂಗೀತದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸುತ್ತದೆ. ಪ್ರದಿಪ್​ ಪದ್ಮಕುಮಾರ್​ ಛಾಯಾಗ್ರಹಣ ಕಥೆಗೆ ಪೂರಕವಾಗಿದೆ. ಒಟ್ಟಾರೆ ಈ ವಾರದ ರೊಮ್ಯಾಂಟಿಕ್​ ಕಾಮಿಡಿಗಳ ಅಬ್ಬರದ ನಡುವೆ ಆ್ಯಕ್ಷನ್​ ಪ್ರಿಯರಿಗೆ "ದ ಟಾಸ್ಕ್​' ಉತ್ತಮ ಆಯ್ಕೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net