ಒಟಿಟಿಗೆ ಬಂದ ಪರಿಣೀತಿ: ‘ಶಕ್: ಟ್ರಸ್ಟ್ ನೋವನ್’ ಮೂಲಕ ವೆಬ್‌ಸರಣಿಯಲ್ಲಿ ಮಿಂಚಲು ಸಿದ್ಧರಾದ ನಟಿ

ಶಕ್ ಸರಣಿ ಪೋಸ್ಟರ್​
ಶಕ್ ಸರಣಿ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಸಿನಿಮಾಗಳ ಜತೆ ಜತೆಗೆ ಒಟಿಟಿ ಸರಣಿಗಳಲ್ಲೂ ಮಿಂಚುತ್ತಿರುವ ನಟಿಯರು
  • ಪರಿಣೀತಿ ಚೋಪ್ರಾ ಹೊಸ ಸೇರ್ಪಡೆ, ಒಟಿಟಿಗೆ ನಟಿ ಪದಾರ್ಪಣೆ
  • ‘ಶಕ್: ಟ್ರಸ್ಟ್ ನೋ ವನ್’ ಎಂಬ ಸರಣಿಯಲ್ಲಿ ಪರಿಣೀತಿ , ಸೆ.24ಕ್ಕೆ ಪ್ರಸಾರ
ಸಿನಿಮಾಗಳ ಜತೆ ಜತೆಗೆ ಒಟಿಟಿ ಸರಣಿಗಳಲ್ಲೂ ಹಲವು ಬಾಲಿವುಡ್ ತಾರೆಯರು ಮಿಂಚುತ್ತಿದ್ದಾರೆ. ನಟಿಯರಾದ ಕರೀನಾ ಕಪೂರ್ ಖಾನ್, ಸಾನ್ಯಾ ಮಲ್ಹೋತ್ರಾ, ಹುಮಾ ಖುರೇಷಿ ಸೇರಿ ಹಲವರು ವೆಬ್‌ಸರಣಿಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಈ ಪಟ್ಟಿಗೆ ನಟಿ ಪರಿಣೀತಿ ಚೋಪ್ರಾ ಹೊಸ ಸೇರ್ಪಡೆಯಾಗುತ್ತಿದ್ದಾರೆ. ಸಂಸದ ರಾಘವ್ ಚಡ್ಡಾ ಜತೆ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅವರು ಕಳೆದ ಅಕ್ಟೋಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಆರೈಕೆಯ ಕಾರಣಕ್ಕಾಗಿ ಕೆಲ ತಿಂಗಳುಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದ ಪರಿಣೀತಿ ಇದೀಗ ಬಾಲಿವುಡ್‌ಗೆ ಮರಳಿದ್ದಾರೆ. ‘ಮಾಲಾಮಾಲ್ ವೀಕ್ಲಿ 2’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಇದರ ಬೆನ್ನಲ್ಲೇ ನಟಿ ಕುರಿತಂತೆ ಮತ್ತೊಂದು ಅಪ್‌ಡೇಟ್ ದೊರೆತಿದ್ದು, ಅವರು ‘ಶಕ್: ಟ್ರಸ್ಟ್ ನೋ ವನ್’ ಎಂಬ ಸರಣಿ ಮೂಲಕ ಒಟಿಟಿಗೆ ಡೆಬ್ಯೂ ಮಾಡುತ್ತಿದ್ದಾರೆ. ಇದು ಅವರು ನಟಿಸುತ್ತಿರುವ ಮೊದಲ ವೆಬ್ ಸರಣಿಯಾಗಿದೆ. ಕಳೆದು ಹೋಗಿರುವ ಮಗುವಿಗಾಗಿ ತಾಯಿಯೊಬ್ಬಳು ಒಂಬತ್ತು ವರ್ಷಗಳಿಂದ ಹುಡುಕಾಟ ನಡೆಸುತ್ತಿರುವ ಮಿಸ್ಟ್ರಿ-ಥ್ರಿಲ್ಲರ್ ಕಥೆಯಿದು. ರೆನ್ಸಿಲ್ ಡಿ’ಸಿಲ್ವಾ ನಿರ್ದೇಶಿಸುತ್ತಿರುವ ಈ ಸರಣಿಗೆ ಸಿದ್ಧಾರ್ಥ್ ಪಿ. ಮಲ್ಹೋತ್ರಾ ಬಂಡವಾಳ ಹೂಡಿದ್ದಾರೆ. ಪರಿಣೀತಿ ಚೋಪ್ರಾ ಜತೆಗೆ ಸೋನಿ ರಾಜ್ದಾನ್, ಅನುಪ್ ಸೋನಿ, ಜೆನಿರ್ ವಿಂಗೆಟ್, ತಾಹಿರ್ ರಾಜ್ ಭಾಸಿನ್, ಹರ್ಲಿನ್ ಸೇಥಿ, ಧ್ರುವ್ ಚೌದರಿ ತಾರಾಗಣದಲ್ಲಿದ್ದಾರೆ. ಇದೇ 24ಕ್ಕೆ ಈ ಸರಣಿ ತೆರೆ ಕಾಣಲಿದೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net