_1786262969109.webp?w=480&auto=format%2Ccompress&fit=max)
_1786262969109.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್’ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ. ಬೆಂಗಳೂರಿನ ಗಾಂಧಿನಗರದ ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರತಂಡ ಶನಿವಾರ ಸಂಜೆ ಆಯೋಜಿಸಿದ್ದ ರಾಷ್ಟ್ರೀಯ ಪ್ರಚಾರ ಕಾರ್ಯಕ್ರಮದಲ್ಲಿ ಕನ್ನಡ ಸೇರಿ ಐದು ಭಾಷೆಯಲ್ಲಿ ಟ್ರೇಲರ್ ರಿಲೀಸ್ ಮಾಡಲಾಯಿತು. ನಟ ಶಿವರಾಜಕುಮಾರ್ ಟ್ರೇಲರ್ ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭಕೋರಿದರು. 4.38 ನಿಮಿಷದ ದೀರ್ಘಾವಧಿ ಟ್ರೇಲರ್‌ನಲ್ಲಿ ಯಶ್ ಮೂರು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿ, ದ್ವೇಷ, ಪ್ರತೀಕಾರ, ಅಧಿಕಾರದ ಹಸಿವು ಸೇರಿ ಹೈ-ಆ್ಯಕ್ಷನ್ ಜತೆಗೆ ವಿವಿಧ ಭಾವನೆಗಳು ಟ್ರೇಲರ್‌ನಲ್ಲಿ ವ್ಯಕ್ತವಾಗಿವೆ. ಬಾಲಕನ ಅಳುವಿನೊಂದಿಗೆ ಆರಂಭವಾಗುವ ಟ್ರೇಲರ್ ಬಳಿಕ ಯಶ್ ಗುಂಡು ಹಾರಿಸಿ, ಅಬ್ಬರಿಸುತ್ತಾರೆ. ಆ ಮಧ್ಯೆ ‘ಮುಖವಾಡದಿಂದ ಮುಖದ ಮೇಲಿನ ದುಃಖ ಬೇಕಾದ್ರೂ ಮುಚ್ಚಿಡಬಹುದು, ಹಣೆ ಮೇಲೆ ಬರೆದಿರುವ ದುರಂತನ್ನಲ್ಲ.’- ನಾಡಿಯಾ ಪಾತ್ರದ ಕಿಯಾರಾ ಡೈಲಾಗ್ ಗಮನಸೆಳೆಯುತ್ತದೆ. ಬಹುತೇಕ ರಾಯಲ್ ಸರ್ಕಸ್ ಕ್ಯಾಂಪ್ ಸುತ್ತವೇ ಹಲವು ದೃಶ್ಯಗಳಿದ್ದು, ಇಲ್ಲಿ ಸರ್ಕಸ್ ಕ್ಯಾಂಪ್ ಕೇಂದ್ರಬಿಂದುವಾಗಿದೆ. ಯಶ್ ಜತೆಗೆ ಮಹಿಳಾ ಪಾತ್ರಗಳು ಗಮನಾರ್ಹವಾಗಿ ಮೂಡಿಬಂದಿವೆ. ಈ ಹಿಂದೆ ಕೇವಲ ಗ್ಲಾಮರ್ ರೂಪದಲ್ಲಿ ಕಂಡಿದ್ದ ಮಹಿಳಾ ಪಾತ್ರಧಾರಿಗಳು ಟ್ರೇಲರ್‌ನಲ್ಲಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಜತೆಗೆ ಕಿಯಾರಾ ಅಡ್ವಾಣಿ ಟ್ರೇರ್‌ನಲ್ಲಿ ಹೈಲೈಟ್ ಆಗಿದ್ದಾರೆ. ನಯನತಾರಾ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಪಾತ್ರಗಳು ಪ್ರತೀಕಾರ ಹಠದಲ್ಲಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಟ್ರೇಲರ್ ಮೂಡಿಬಂದಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಇದೇ ಆಗಸ್ಟ್ 26ಕ್ಕೆ ತೆರೆ ಮೇಲೆ ಬರಲಿದೆ.