ಟಾಲಿವುಡ್ ತಾರಾ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ‘ರಣಬಾಲಿ’. ‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಚಿತ್ರಗಳ ಬಳಿಕ ಏಳು ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗಿದ್ದು, ಈ ಹಿನ್ನೆಲೆಯಲ್ಲಿ ‘ರಣಬಾಲಿ’ ಕುರಿತು ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೊಸ ಟೀಸರ್ ಮೂಲಕ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಅದರಂತೆ, ಅಕ್ಟೋಬರ್ 16ಕ್ಕೆ ‘ರಣಬಾಲಿ’ ತೆರೆಗೆ ಬರಲಿದೆ. 1854ರಿಂದ 1878ರ ನಡುವೆ ರಾಯಲಸೀಮೆ ಪ್ರಾಂತ್ಯದ ಜನರು ಬ್ರಿಟಿಷರ ವಿರುದ್ಧ ತಿರುಗಿಬಿದ್ದ ಕಥೆಯಿದು. ಇಲ್ಲಿ ವಿಜಯ್ ದೇವರಕೊಂಡ ‘ರಣಬಾಲಿ’ ಎಂಬ ಸ್ವಾತಂತ್ರ್ಯ ಹೋರಾಟಗಾರನಾಗಿ ಅಬ್ಬರಿಸಿದ್ದಾರೆ. ಹಸಿವಿನಿಂದ ನರಳುತ್ತಿರುವ ರಾಯಲಸೀಮೆ ಪ್ರಾಂತ್ಯದ ಜನ ಬ್ರಿಟಿಷರ ಹಿಂಸೆಗೆ ನರಳಿ ವಲಸೆ ಹೋಗುತ್ತಿರುವ ದೃಶ್ಯದಿಂದ ಟೀಸರ್ ಆರಂಭವಾಗುತ್ತದೆ. ತುತ್ತು ಅನ್ನಕ್ಕಾಗಿ ಹಕ್ಕು ಕೇಳುವವರ ಮೇಲೆ ಬ್ರಿಟಿಷರ ದರ್ಪ ಮುಂದುವರಿದಾಗ, ಅವರ ವಿರುದ್ಧ ‘ರಣಬಾಲಿ’ ಸೆಟೆದು ನಿಲ್ಲುತ್ತಾನೆ. ಇಡೀ ಟೀಸರ್ ವಿಜಯ್ ದೇವರಕೊಂಡ ಮೇಲೆ ಕೇಂದ್ರೀಕೃವಾಗಿದೆ. ಕೆಲ ದೃಶ್ಯಗಳಲ್ಲಿ ಜಯಮ್ಮ ಪಾತ್ರಧಾರಿ ರಶ್ಮಿಕಾ ಮಂದಣ್ಣ ಹಾದು ಹೋಗುತ್ತಾರೆ. ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೊ ಬ್ರಿಟಿಷ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ‘ಶ್ಯಾಮ್ ಸಿಂಗ್ ರಾಯ್’ ಖ್ಯಾತಿಯ ರಾಹುಲ್ ಸಂಕೃತ್ಯನ್ ಆ್ಯಕ್ಷನ್-ಕಟ್ ಹೇಳಿದ್ದಾರೆ. -ಏಜೆನ್ಸೀಸ್