ROOPA IYER: ಬೆಂಗಳೂರು: ನಟನೆ, ನಿರ್ದೇಶನ ಎರಡೂ ವಿಭಾಗದಲ್ಲಿ ತೊಡಗಿಸಿಕೊಂಡವರು ನಟಿ ರೂಪಾ ಅಯ್ಯರ್. ‘ಮ್ಯಾಜಿಕ್ ಅಜ್ಜಿ, ‘ಧಾತು’, ‘ಮುಖಪುಟ’ ಚಿತ್ರಗಳಲ್ಲಿ ನಟಿಸಿದ್ದ ರೂಪಾ, ‘ಮುಖಪುಟ’, ‘ಚಂದ್ರ’ ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದರು. ಇಂತಹ ಅಪರೂಪದ ಪ್ರತಿಭೆ ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರವಾಗಿದ್ದರು. 2013ರಲ್ಲಿ ತೆರೆಕಂಡ ‘ಚಂದ್ರ’ ಬಳಿಕ ರೂಪಾ ಅಯ್ಯರ್ ಸಿನಿಮಾ ರಂಗದಲ್ಲಿ ಹೆಚ್ಚು ತೊಡಗಿಸಿಕೊಂಡಿರಲಿಲ್ಲ. ಇದೀಗ ಅವರು ಹಿಂದಿಯಲ್ಲಿ ಮೂಡಿಬರುತ್ತಿರುವ ಸ್ವಾತಂತ್ರ್ಯ ಹೋರಾಟಗಾರ್ತಿ ನೀರಾ ಆರ್ಯ ಜೀವನಧಾರಿತ ‘ಆಜಾದ್ ಭಾರತ್’ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಹಿರಿಯ ಸ್ವಾತಂತ್ರ್ಯಸೇನಾನಿ ಸುಭಾಷ್ ಚಂದ್ರ ಬೋಸ್ ಆರಂಭಿಸಿದ್ದ ಇಂಡಿಯನ್ ನ್ಯಾಷನಲ್ ಆರ್ಮಿಯ ‘ರಾಣಿ ಝಾನ್ಸಿ ರೆಜಿಮೆಂಟ್’ನಲ್ಲಿದ್ದ ನೀರಾ ಆರ್ಯ ಸಾಹಸಗಾಥೆಯನ್ನು ರೂಪಾ ತೆರೆ ಮೇಲೆ ತರುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡವು ರಿಲೀಸ್‌ಗೆ ಸಿದ್ಧವಾಗಿದ್ದು, ಜನವರಿ 2ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ‘ಸಿನಿಮಾದ ಮೂಲಕ ಸಮಾಜಕ್ಕೆ ಒಂದು ಸಂದೇಶ ನೀಡಬೇಕು ಎನ್ನುವುದೇ ನನ್ನ ಗುರಿ. ಈ ಹಾದಿಯಲ್ಲಿ ನನ್ನಲ್ಲಿ ಹೆಚ್ಚು ಕಾಡಿದ್ದೆ ನೀರಾ ಆರ್ಯ ಬದುಕು. ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರು ಮಹಿಳಾ ಸೇನೆಯನ್ನು ಕಟ್ಟಿದ್ದರು. ಅದರಲ್ಲಿ ಕ್ಯಾಪ್ಟನ್ ಲಕ್ಷ್ಮೀ, ನೀರಾ ಆರ್ಯ ಪ್ರಮುಖರು. ‘ಆಜಾದ್ ಭಾರತ್’ನಲ್ಲಿ ನಾನು ನೀರಾ ಆರ್ಯ ಕುರಿತು ಹೇಳುತ್ತಿದ್ದೇನೆ. 1942ರಿಂದ 46ರ ಕಾಲಘಟ್ಟದ ಕಥೆ ಇದು, ಇಂತಹ ನೀರಾ, ಸಿಐಡಿ ಅಧಿಕಾರಿ ಶ್ರೀಕಾಂತ್ ದಾಸ್ ಎಂಬುವರನ್ನು ಮದುವೆಯಾಗುತ್ತಾಳೆ. ಆದರೆ, ಆತ ಸುಭಾಷ್ ಚಂದ್ರ ಬೋಸ್ ಅವರನ್ನೇ ಕೊಲೆ ಮಾಡಲು ಯೋಜನೆ ರೂಪಿಸುವುದಾಗ ಆಕೆ ಸ್ವಂತ ಗಂಡನನ್ನೇ ಕೊಲೆ ಮಾಡುತ್ತಾಳೆ. ಬಳಿಕ ಆಕೆ ಎದುರಿಸುವ ಹೋರಾಟದ ಬದುಕನ್ನು ಇಲ್ಲಿ ಚಿತ್ರಿಸಲಾಗಿದೆ. ದೇಶಭಕ್ತಿ, ಮಹಿಳಾ ಸಬಲೀಕರಣ, ಜವಾಬ್ದಾರಿ ವಿಚಾರಗಳು ಇಲ್ಲಿವೆ’ ಎಂದು ರೂಪಾ ಅಯ್ಯರ್ ಮಾಹಿತಿ ನೀಡಿದರು. ರೂಪಾ ಅಯ್ಯರ್ ಜತೆ ನೇತಾಜಿ ಪಾತ್ರದಲ್ಲಿ ಶ್ರೇಯಸ್ ತಲ್ಪಾಡೆ, ತಂದೆಯ ಪಾತ್ರದಲ್ಲಿ ಸುರೇಶ್ ಒಬೆರಾಯ್, ಸುಚೇಂದ್ರ ಪ್ರಸಾದ್, ಹಿತಾ ಚಂದ್ರಶೇಖರ್, ಇಂದ್ರ ತಿವಾರಿ ಕಲಾಬಳಗದಲ್ಲಿದ್ದಾರೆ.