ಮರಾಠಿ ರಂಗಭೂಮಿ ಕಲಾವಿದ, "ಜೋಗ್ವಾ' ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಟ ಉಪೇಂದ್ರ ಲಿಮಾಯೆ ಮೂರು ದಶಕ ಮೀರಿದ ಕರಿಯರ್ನಲ್ಲಿ ಮರಾಠಿ, ಹಿಂದಿ, ತೆಲುಗಿನ 60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕ, ಖಳನಾಯಕ, ಕಾಮಿಡಿಯನ್, ಪೋಷಕ ಪಾತ್ರಗಳಲ್ಲಿ ಭಿನ್ನ, ವಿಭಿನ್ನ ಅವತಾರಗಳಲ್ಲಿ ಮಿಂಚಿರುವ ಅವರು ತಮ್ಮದೇ ಛಾಪು ಮೂಡಿಸಿದ್ದು, ಇದೀಗ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. "ಕವಲುದಾರಿ', "ರಾಮನ ಅವತಾರ', "ರುದ್ರ ಗರುಡ ಪುರಾಣ' ಖ್ಯಾತಿಯ ರಿಷಿ ಮತ್ತು ಜನಪ್ರಿಯ ಬಹುಭಾಷಾ ನಿರ್ದೇಶಕ ರಾಮಗೋಪಾಲ್ ವರ್ಮಾ ಗರಡಿಯಲ್ಲಿ ಪಳಗಿರುವ "ಸ್ಟಾಕರ್' ಖ್ಯಾತಿಯ ಕಿಶೋರ್ ಭಾರ್ಗವ್ ಕಾಂಬಿನೇಷನ್ನಲ್ಲಿ ಈ ಹೊಸ ಸಿನಿಮಾ ಮೂಡಿಬರಲಿದೆ. ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ನಾಯಕ ರಿಷಿ ವಿರುದ್ಧ ಖಡಕ್ ವಿಲನ್ ಆಗಿ ಉಪೇಂದ್ರ ಲಿಮಾಯೆ ಅಬ್ಬರಿಸಲಿದ್ದಾರೆ. ಚಿತ್ರದ ಬಗ್ಗೆ ನಾಯಕ ರಿಷಿ, "ಇದು ಫ್ಯಾಂಟಸಿ ಹಿನ್ನೆಲೆಯ ಕಥೆ. ತುಂಬ ಗಟ್ಟಿ ಪಾತ್ರ. ವಿಲನ್ ರೋಲ್ ಮಾಡುವ ಪಾತ್ರಧಾರಿ ಹೀಗೇ ಇರಬೇಕು ಅಂತ ನಿರ್ದೇಶಕ ಕಿಶೋರ್ ಭಾರ್ಗವ್ ಮೊದಲೇ ಅಂದುಕೊಂಡಿದ್ದರು. ಕಲಾವಿದರ ಹುಡುಕಾಟದ ಸಮಯದಲ್ಲಿ ಉಪೇಂದ್ರ ಲಿಮಾಯೆ ಈ ಪಾತ್ರಕ್ಕೆ ಸರಿಹೊಂದುತ್ತಾರೆ ಅಂತನ್ನಿಸಿತು. ಅವರನ್ನು ಸಂಪರ್ಕಿಸಿ, ಕಥೆ ಹೇಳಿದಾಗ ಒಪ್ಪಿದರು. ಇದೇ ನವೆಂಬರ್ನಿಂದ ಶೂಟಿಂಗ್ ಪ್ರಾರಂಭವಾಗಲಿದೆ' ಎಂದು ಮಾಹಿತಿ ನೀಡುತ್ತಾರೆ. ರಿಷಿ ಮತ್ತು ಉಪೇಂದ್ರ ಫೈನಲ್ ಆದ ಬೆನ್ನಲ್ಲೇ ಸದ್ಯ ಕಿಶೋರ್ ಭಾರ್ಗವ್ ಮತ್ತು ತಂಡ ನಾಯಕಿ ಸೇರಿ ಉಳಿದ ತಾರಾಗಣದ ಆಯ್ಕೆಯಲ್ಲಿ ಬಿಜಿಯಾಗಿದೆ. ಶೂಟಿಂಗ್ ಪ್ರಾರಂಭದ ಸಮಯದಲ್ಲೇ ಶೀರ್ಷಿಕೆ ರಿವೀಲ್ ಮಾಡುವ ಪ್ಲಾ$್ಯನ್ ಚಿತ್ರತಂಡದ್ದು. ಉಳಿದಂತೆ ಸೋಮಶೇಖರ್ ಸಂಭಾಷಣೆ, ಸಾಹಿತ್ಯ ಮತ್ತು ಸಂಕಲನದ ಜವಾಬ್ದಾರಿ ಹೊತ್ತಿದ್ದು, ಅನಂತ್ ಭಾರದ್ವಾಜ್ ಛಾಯಾಗ್ರಹಣ ಮತ್ತು ಸ್ಕಂದ ಕಶ್ಯಪ್ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ.