ಬೆಂಗಳೂರು: ಕನ್ನಡದ ‘ಖುಷಿಯಾಗಿದೆ ಯಾಕೋ’, ‘ಕಣ್ಣಲ್ಲೇ ನನ್ನ ಚಿತ್ರ ಬರೆದೋನು’ ಸೇರಿ ಅನೇಕ ಮೆಲೋಡಿ ಗೀತೆಗಳನ್ನು ಸಂಯೋಜಿಸಿದವರು ಸಂಗೀತ ನಿರ್ದೇಶಕ ಅಭಿಮಾನ್ ರಾಯ್. ಇದೀಗ ಅವರ ಸಂಗೀತ ಸಂಯೋಜಿಸಿರುವ ಕನ್ನಡದ ‘2+’ ಚಿತ್ರದ ಮೂಲಕ ಹೊಸ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಹೌದು, ಈ ಚಿತ್ರದ ‘ನನಗೂ ನಿನಗೂ ನಡುವೆ’ ಎಂಬ ಶೀರ್ಷಿಕೆಯ ಗೀತೆಯನ್ನು ಒಟ್ಟು ಪ್ರಪಂಚದ 34 ಭಾಷೆಗಳಲ್ಲಿ ಹೊರ ತಂದಿದ್ದಾರೆ. ಪ್ಯಾನ್ ಇಂಡಿಯಾ ಅಬ್ಬರದಲ್ಲಿ ಐದರಿಂದ ಏಳೆಂಟು ಭಾಷೆಯಲ್ಲಿ ಹಾಡು ರಿಲೀಸ್ ಮಾಡುವ ಕಾಲದಲ್ಲಿ ಅಭಿಮನ್ 34 ಭಾಷೆಯಲ್ಲಿ ಹಾಡು ರಿಲೀಸ್ ಮಾಡಿರುವುದು ಹೊಸ ಸಾಹಸ ಎನ್ನಲಾಗುತ್ತಿದೆ. ಇನ್ನು 34 ವಿವಿಧ ಭಾಷೆಯ ಹಾಡುಗಳನ್ನು 34 ಗಣ್ಯರು ಇತ್ತೀಚೆಗೆ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಕನ್ನಡದಲ್ಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ, ಕೊಡವ, ಬ್ಯಾರಿ, ಕುಂದಾಪುರ, ಮಂಡ್ಯ, ಕೊಂಕಣಿ, ತುಳು ಸೇರಿ 9 ಶೈಲಿಯಿದೆ. ಉಳಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಒಡಿಯಾ, ಬೆಂಗಾಲಿ, ಪಂಜಾಬಿ, ಗುಜರಾತಿ ಅಲ್ಲದೇ ಇಂಗ್ಲೀಷ್, ರಶಿಯಾ, ಜಪಾನೀಸ್, ಇಟಾಲಿಯನ್ ಸೇರಿ ವಿವಿಧ ಭಾಷೆಗಳಲ್ಲಿ ಈ ಹಾಡು ಮೂಡಿಬಂದಿದ್ದು, 60ಕ್ಕೂ ಅಧಿಕ ಯುವ ಗಾಯಕರು ಧ್ವನಿಯಾಗಿದ್ದಾರೆ.