_1787147354435.webp?w=480&auto=format%2Ccompress&fit=max)
_1787147354435.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಕನ್ನಡದ ‘ಸೂರ್ಯವಂಶ’ ನಟಿ ಇಶಾ ಕೊಪ್ಪಿಕರ್ ನಟನೆ ಜತೆಗೆ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ದೇಶದಲ್ಲಿ ನಡೆಯುವ ವಿಚಾರಗಳ ಮೇಲೆ ಆಗಾಗ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಅಂತೆಯೇ, ಇತ್ತೀಚೆಗೆ ದೇಶಾದ್ಯಂತ ಸದ್ದು ಮಾಡಿದ್ದ ಜೆನ್ ಜೀ ಪ್ರತಿಭಟನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಟಿಯು ನಿರಂತರವಾಗಿ ಮಾತನಾಡುತ್ತಿದ್ದಾರೆ. ಅದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುವ ಜತೆಗೆ ‘ಅಂಧಭಕ್ತೆ’ ಎಂದು ಟೀಕಿಸಿದ್ದಾರೆ. ಅದಕ್ಕೆ ಬೇಸರಗೊಂಡಿರುವ ಇಶಾ ಕೊಪ್ಪಿಕರ್ ಇತ್ತೀಚೆಗೆ ವಿಡಿಯೋ ಮೂಲಕ ಉತ್ತರಿಸಿದ್ದು, ‘ನನ್ನ ಭಕ್ತಿ ಏನಿದ್ದರೂ ದೇಶಕ್ಕೆ ಹೊರತು, ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ದೇಶವನ್ನು ಪ್ರೀತಿಸುವ ಜತೆಗೆ ಪ್ರಗತಿ ಬಯಸುವುದನ್ನು ನೀವು ಅಂಧಭಕ್ತಿ ಎನ್ನುವುದಾದರೆ, ಹೌದು, ನಾನು ಅಂಧಭಕ್ತೆಯೇ. ಆದರೆ, ನನ್ನ ಭಕ್ತಿ ಯಾವುದೇ ರಾಜಕೀಯ ಪಕ್ಷಕ್ಕಲ್ಲ, ಬದಲಾಗಿ ದೇಶಕ್ಕಾಗಿ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ನನ್ನ ದೇಶವೇ ನನಗೆ ಮೊದಲು. ನನ್ನ ವಿರುದ್ಧ ಮಾತನಾಡುವ ಬದಲು ನೀವು ದೇಶಕ್ಕೆ ಗೌರವ ಹಾಗೂ ಕೊಡುಗೆ ನೀಡುವುದನ್ನು ಕಲಿಯಿರಿ. ದೇಶವನ್ನು ಪ್ರೀತಿಸುತ್ತೇನೆ ಎಂದು ಕೇವಲ ಬಾಯಿಮಾತಿನಲ್ಲಿ ಹೇಳುವುದಲ್ಲ, ಬದಲಾಗಿ ಇಡೀ ದೇಶವೇ ಕೊಂಡಾಡುವಂತಹ ಏನಾದರೂ ಕೊಡುಗೆ ನೀಡಬೇಕು’ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಇಶಾ ಕೊಪ್ಪಿಕರ್ ಕನ್ನಡದ ‘ಸೂರ್ಯವಂಶ’, ‘ಓ ನನ್ನ ನಲ್ಲೇ’, ‘ಕವಚ’ ಸೇರಿ ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. -ಏಜೆನ್ಸೀಸ್