‘ವಯಸ್ಸು ಕೇವಲ ನಂಬರ್ ಅಷ್ಟೇ, ದೇಹಕ್ಕಲ್ಲ’ ಎಂಬ ಮಾತು ಮಾಲಿವುಡ್ ಮೆಗಾಸ್ಟಾರ್ ಮಮ್ಮೂಟ್ಟಿಗೆ ಒಪ್ಪುತ್ತದೆ. ಸೋಮವಾರ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಅವರಿಗೆ 2026 ಶುಭದಾಯಕವಾಗಿದೆ. ಇದೇ ವರ್ಷ ಅವರಿಗೆ ಅತ್ಯುನ್ನತ ‘ಪದ್ಮಭೂಷಣ’ ಗೌರವ ದೊರೆತಿದ್ದು, ಜತೆಗೆ ‘ಭ್ರಮಯುಗಂ’ ಚಿತ್ರದ ನಟನೆಗೆ ನಾಲ್ಕನೇ ಬಾರಿ ರಾಷ್ಟ್ರಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಡಬಲ್ ಸಂಭ್ರಮದ ಜತೆಗೆ ಮಮ್ಮೂಟ್ಟಿ 75ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈನಲ್ಲಿದ್ದ ಅವರು ಸೋಮವಾರ ಬೆಳಗ್ಗೆ ಕೇರಳದ ಕೌಮುದಿಗೆ ತೆರಳಿ, ಕುಟುಂಬದ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇನ್ನು ಸಾಮಾನ್ಯವಾಗಿ 75 ವಯಸ್ಸು ಅಂದರೆ, ಬಹುತೇಕ ಕಲಾವಿದರು ಪೋಷಕ ಪಾತ್ರಗಳಿಗೆ ಸೀಮಿತವಾಗಿಬಿಡುತ್ತಾರೆ. ಆದರೆ, ಮಮ್ಮೂಟ್ಟಿಗೆ ಅದು ಅನ್ವಯಿಸುವುದಿಲ್ಲ. ಇಂದಿಗೂ ಅವರು ಯಂಗ್ ಆ್ಯಂಡ್ ಎನರ್ಜಿಟಿಕ್. ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಾಯಕನಾಗಿಯೇ ಮುಂದುವರಿದಿದ್ದಾರೆ. ಐದೂವರೆ ದಶಕಗಳ ಸುದೀರ್ಘ ಸಿನಿಜರ್ನಿಯಲ್ಲಿ 425ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಮಾಲಿವುಡ್ ಮೆಗಾಸ್ಟಾರ್ ಈ ವಯಸ್ಸಿನಲ್ಲೂ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಮಮ್ಮೂಟ್ಟಿ ಜನ್ಮದಿನ ಅಂಗವಾಗಿ ಅವರ ‘ಮೇಳ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ನಟಿಸುವುದರ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಮಲಯಾಳಂನ ‘ಫ್ಯಾಮಿಲಿ’ ನಿರ್ದೇಶಕ ನಿತೀಶ್ ಸಹದೇವ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇನ್ನು ಮಮ್ಮೂಟಿ ನಾಯಕನಾಗಿ ಅಭಿನಯಿಸಿದ್ದ ಎರಡನೇ ಸಿನಿಮಾ ‘ಮೇಳ’ 1980ರಲ್ಲಿ ರಿಲೀಸ್ ಆಗಿತ್ತು. ಇದೀಗ 46 ವರ್ಷಗಳ ನಂತರ ಅದೇ ಹೆಸರಿನ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಇದರ ಜತೆಗೆ ತಮಿಳಿನಲ್ಲಿ ಧನುಷ್ ಅಭಿನಯದ ‘ಓಂ’ ಸಿನಿಮಾದಲ್ಲಿ ಮಮ್ಮೂಟ್ಟಿ ಅಭಿನಯಿಸುತ್ತಿದ್ದು, ಅವರ ಪಾತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಇಲ್ಲಿ ಅವರು ಕಾರ್ತಿಕೇಯ ಎಂಬ ಪಾತ್ರದಲ್ಲಿದ್ದು, ಮಾಸ್ ಹಾಗೂ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಮಮ್ಮೂಟ್ಟಿ ಮಲಯಾಳಂನ ‘ಪಾದಯಾತ್ರಾ’, ‘ಲಾ ಆ್ಯಂಡ್ ಆರ್ಡರ್’, ‘ಮೆಟ್ಟಾಂಚರಿ ಮಾಫಿಯಾ’ ಮತ್ತು ಹೆಸರಿಡದ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್