sakshi meghana ಬೆಂಗಳೂರು: ಕನ್ನಡದ ‘ಜೋಗಯ್ಯ’, ‘ಜೈ ಭಜರಂಗ ಬಲಿ’, ‘ರಥ’, ‘ಆದರ್ಶ’ ಸೇರಿ ಹಲವು ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಸಾಕ್ಷಿ ಮೇಘನಾ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ನಟಿಯ ‘ಲೋರ್ಸ್’, ‘ಲೀಸಾ’, ‘ಪದ್ಮಾವತಿ’, ಬೆಸ್ಟ್ ಫ್ರೆಂಡ್’ ಚಿತ್ರಗಳು ಬಿಡುಗಡೆಯಾಗಿದ್ದು, ಇನ್ನೂ ಆರು ಚಿತ್ರಗಳು ರಿಲೀಸ್‌ಗೆ ಸಿದ್ಧವಾಗಿವೆ. ಅದರ ನಡುವೆಯೇ ಮೇಘನಾ ಇದೀಗ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ರವಿ ಪ್ರಿಯನ್ ನಿರ್ದೇಶನದ ‘ಮಗಾಬಲಿ’ ಮೂಲಕ ಅವರು ತಮಿಳು ಚಿತ್ರರಂಗದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಈ ಚಿತ್ರ ಇದೇ ತಿಂಗಳ 12ರಂದು ರಿಲೀಸ್ ಆಗಲಿದೆ. ಇದೇ ಸಂಭ್ರಮದಲ್ಲಿ ತಮ್ಮ ಚೊಚ್ಚಲ ಕಾಲಿವುಡ್ ಸಿನಿಮಾ ಬಗ್ಗೆ ಮೇಘನಾ ‘ವಿಜಯವಾಣಿ’ ಜತೆ ಸಂತಸ ಹಂಚಿಕೊಂಡರು. ‘ತಮಿಳು ಧಾರಾವಾಹಿಯೊಂದಕ್ಕೆ ಆಡಿಷನ್ ನೀಡಲು ಹೋಗಿದ್ದೆ. ಅವಕಾಶ ಸಿಗಲಿಲ್ಲ. ಆದರೆ, ಅದೇ ಧಾರಾವಾಹಿ ನಿರ್ದೇಶಕರು ವರ್ಷದ ಬಳಿಕ ನನ್ನನ್ನು ಸಂಪರ್ಕಿಸಿ, ‘ಮಗಾಬಲಿ’ ಚಿತ್ರಕ್ಕೆ ಅವಕಾಶ ನೀಡಿದರು. ಆರ್ ನೀಡಿದ ಕೇವಲ 15 ದಿನಗಳಲ್ಲೇ ಶೂಟಿಂಗ್ ಆರಂಭವಾಯಿತು. ಕೊಯಮತ್ತೂರಿನ ಸಮೀಪದ ಹಳ್ಳಿಯಲ್ಲಿ 15 ದಿನ ಹಾಗೂ ಚೆನ್ನೈನಲ್ಲಿ 5 ದಿನ ಶೂಟಿಂಗ್ ಮುಗಿಸಿಕೊಟ್ಟೆ. ನನಗೆ ಸ್ಪಷ್ಟವಾಗಿ ತಮಿಳು ಬಾರದ ಕಾರಣ ಡಬ್ಬಿಂಗ್ ಮಾಡಲಿಲ್ಲ. ಆದರೆ, ಈಗೀಗ ತಮಿಳು ಅರ್ಥ ಮಾಡಿಕೊಂಡು, ಅಲ್ಪ-ಸ್ವಲ್ಪ ಮಾತನಾಡುತ್ತಿದ್ದೇನೆ. ‘ಮಗಾಬಲಿ’ಯಲ್ಲಿ ನನ್ನ ಪಾತ್ರದ ಹೆಸರೂ ಸಹ ಮೇಘನಾ ಅಂತ. ಸಿನಿಮಾ ನಿರ್ಮಾಪಕಿ ಪಾತ್ರ. ಒಂದು ಹಳ್ಳಿಗೆ ಶೂಟಿಂಗ್ ಹೋದಾಗ, ಅಲ್ಲಿನ ಅವ್ಯವಸ್ಥೆ, ಮೂಢನಂಬಿಕೆ ಮತ್ತು ಹಲವು ವಿಚಾರಗಳ ವಿರುದ್ಧ ಹೋರಾಟಕ್ಕೆ ನಿಲ್ಲುತ್ತೇನೆ. ಕಥೆಯಲ್ಲಿ ಹಾರರ್-ಥ್ರಿಲ್ಲಿಂಗ್ ಅಂಶಗಳೂ ಇವೆ. ಶೂಟಿಂಗ್ ಹಿಂದಿನ ದಿನವೇ ನಾನು ಸ್ಕ್ರಿಪ್ಟ್ ಓದಿ, ಪ್ರಾಕ್ಟೀಸ್ ಮಾಡುತ್ತಿದ್ದ ಕಾರಣ, ಈ ಪಾತ್ರ ಕಷ್ಟ ಅನಿಸಲಿಲ್ಲ’ ಎಂದು ಮಾಹಿತಿ ನೀಡುತ್ತಾರೆ.