ಮಾನವ ಸಂಬಂಧಗಳನ್ನು ಅರಿಯುವ ಪ್ರಯತ್ನವೇ ಎಸ್.ನಾರಾಯಣ್ ಸಿನಿಮಾಗಳ ಆತ್ಮ. ಈ ಅಂಶದ ಜತೆಗೆ ಇಂದಿನ ಬಹುದೊಡ್ಡ ಸಮಸ್ಯೆ ಸುಳಿಯ ಬಗ್ಗೆ ‘ಮಾರುತ’ ಚಿತ್ರದಲ್ಲಿ ಅವರು ಗಮನಸೆಳೆದಿದ್ದಾರೆ. ಮೊದಲರ್ಧ ಕಥೆಯು ಅಷ್ಟು ಹಿಡಿತಕ್ಕೆ ಸಿಗುವುದಿಲ್ಲ. ದ್ವಿತೀಯಾರ್ಧ ಸಮಸ್ಯೆಯ ಬುಡಕ್ಕೆ ಕೈಹಾಕಿದಾಗ ಪ್ರೇಕ್ಷಕನಿಗೆ ಕಥೆ ಅರ್ಥವಾಗುತ್ತದೆ. 153 ನಿಮಿಷಗಳ ದೀರ್ಘ ಕಥೆಯಲ್ಲಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿ, ಅವಧಿಯನ್ನು ಕಡಿಮೆ ಮಾಡಬಹುದಿತ್ತು ಅನಿಸುತ್ತದೆ. ಕ್ಲೈಮ್ಯಾಕ್ಸ್ ಅಬ್ಬರ ಚೆನ್ನಾಗಿ ಮೂಡಿಬಂದಿದ್ದು, ‘ಎಲ್ಲಮ್ಮ’ ಸಾಂಗ್ ಸೊಗಸಾಗಿ ಮೂಡಿಬಂದಿದೆ. ಇನ್ನು ನಟನೆಯಲ್ಲಿ ಶ್ರೇಯಸ್ ಮಂಜು ಇಷ್ಟವಾಗುತ್ತಾರೆ. ದುನಿಯಾ ವಿಜಯ್ ವಿಶೇಷ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಇಡೀ ಕಥೆಗೆ ಮುಖ್ಯಪಾತ್ರ ವಹಿಸುತ್ತಾರೆ. ಬೃಂದಾ ಆಚಾರ್ಯ ಎಮೋಷನ್ಸ್ ತುಂಬಾ ಚೆನ್ನಾಗಿ ಕ್ಯಾರಿ ಮಾಡಿದ್ದಾರೆ. ಕಥೆ ಗಂಭೀರ ಅನಿಸುವಾಗಲೆಲ್ಲಾ ನಡು ನಡುವೆ ಸಾಧು ಕೋಕಿಲ ಕಾಮಿಡಿ ನಗಿಸುತ್ತದೆ. ತಾರಾ, ಶರತ್ ಲೋಹಿತಾಶ್ವ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಕೋಗಿಲೆಪುರ ಪರಿಸರ ಹಾಗೂ ಆ್ಯಕ್ಷನ್ ದೃಶ್ಯಗಳನ್ನು ಛಾಯಾಗ್ರಾಹಕ ಪಿಕೆಎಚ್ ದಾಸ್ ಚೆನ್ನಾಗಿ ಸೆರೆಹಿಡಿದಿದ್ದಾರೆ.