ದಸರಾಕ್ಕೆ ಕಾಜಲ್ ಕಳೆ: ನವರಾತ್ರಿ ಸಂಭ್ರಮದಲ್ಲಿ ‘ಮ್ಯಾಂಗೋ ಪಚ್ಚ’ ನಟಿ KAJAL KUNDER

‘ಮ್ಯಾಂಗೋ ಪಚ್ಚ’ ನಟಿ ಕಾಜಲ್ ಕುಂದರ್ ಮನೆಯಲ್ಲೂ ನವರಾತ್ರಿ ಸಂಭ್ರಮ ಜೋರಾಗಿದೆ. ಪ್ರತಿ ಬಾರಿ ಹಬ್ಬದ ವೇಳೆ ಮುಂಬೈನಲ್ಲಿರುತ್ತಿದ್ದ ಕಾಜಲ್ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನವರಾತ್ರಿ ಆಚರಿಸಲಿದ್ದಾರೆ.
kajal kunder
ಕಾಜಲ್ ಕುಂದರ್
Published on: 

ಬೆಂಗಳೂರು: ನಾಡಹಬ್ಬ ದಸರಾಗೆ ಇಂದು ಚಾಲನೆ ದೊರೆಯಲಿದ್ದು, ಇನ್ನು ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆ ನಡೆಯಲಿದೆ. ಹಬ್ಬದ ಸಂಭ್ರಮದ ಜತೆಜತೆಗೆ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಚಟುವಟಿಕೆಗಳು ಗರಿಗೆದರಲಿವೆ. ಸಿನಿಮಾ ಬಿಜಿ ನಡುವೆ ನಟ-ನಟಿಯರು ಹಬ್ಬಕ್ಕಾಗಿ ಬಿಡುವು ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ‘ಮ್ಯಾಂಗೋ ಪಚ್ಚ’ ನಟಿ ಕಾಜಲ್ ಕುಂದರ್ ಮನೆಯಲ್ಲೂ ನವರಾತ್ರಿ ಸಂಭ್ರಮ ಜೋರಾಗಿದೆ. ಪ್ರತಿ ಬಾರಿ ಹಬ್ಬದ ವೇಳೆ ಮುಂಬೈನಲ್ಲಿರುತ್ತಿದ್ದ ಕಾಜಲ್ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನವರಾತ್ರಿ ಆಚರಿಸಲಿದ್ದಾರೆ. ಹಬ್ಬದ ವಿಶೇಷ ಕುರಿತು ‘ವಿಜಯವಾಣಿ’ ಜತೆ ನಟಿ ಮಾಹಿತಿ ಹಂಚಿಕೊಂಡಿದ್ದು, ‘ಮುಂಬೈನಲ್ಲಿರುವಾಗ ದಾಂಡಿಯಾ, ಗರ್ಬಾದಲ್ಲಿ ಭಾಗವಹಿಸುತ್ತಿದ್ದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹಬ್ಬ ಆಚರಿಸುತ್ತಿದ್ದು, ಇಲ್ಲಿ ದಸರಾ ಹೇಗಿರಲಿದೆ ಎಂಬುದನ್ನು ನೋಡಲು ಕೌತುಕಳಾಗಿದ್ದೇನೆ. ನಮ್ಮ ಮನೆಯಲ್ಲೂ ನವರಾತ್ರಿ ವಿಜೃಂಭಣೆಯಿಂದ ಆಚರಿಸುತ್ತೇವೆ. ದೇವಿಯನ್ನು ಆರಾಧಿಸಿ, ನೈವೇದ್ಯ ಅರ್ಪಿಸುತ್ತೇವೆ. ಅಕ್ಕ ಕಟ್ಟುನಿಟ್ಟಿನ ವ್ರತ ಮಾಡುತ್ತಾರೆ. ಒಂಬತ್ತು ದಿನಗಳ ಕಾಲ ಉಪವಾಸ ಮಾಡುತ್ತಾರೆ, ಜತೆಗೆ ಚಪ್ಪಲಿ ಧರಿಸುವುದಿಲ್ಲ. ನಾನು ಕಠಿಣ ವ್ರತ ಮಾಡುವುದಿಲ್ಲ, ಆದರೆ, ಹಬ್ಬದ ವೇಳೆ ಯಾವುದೇ ಮಾಂಸಾಹಾರ ಸೇವಿಸುವುದಿಲ್ಲ. ದಸರಾ ಎಂದರೆ ನನಗೆ ಮೊದಲು ನೆನಪಾಗುವುದು ನಮ್ಮೂರು ಮಂಗಳೂರು ದಸರಾ. ಅಲ್ಲಿ ದೇವಿಯ ವೈಭವವನ್ನು ನೋಡುವುದೇ ಚೆಂದ. ಇಂದಿಗೂ ಕಣ್ಣಲ್ಲಿ ಕಟ್ಟಿದೆ’ ಎಂದು ಹೇಳಿಕೊಳ್ಳುತ್ತಾರೆ.

ದೇವಿ ಶಕ್ತಿಯ ಪ್ರತೀಕ

ನವರಾತ್ರಿ ಹಬ್ಬದ ಕುರಿತು ಕಾಜಲ್ ತಮ್ಮದೇ ಆದ ವಿವರಣೆ ನೀಡುತ್ತಾ, ‘ದೇವಿಯ ಶಕ್ತಿಯ ಪ್ರತೀಕ ಈ ನವರಾತ್ರಿ. ಒಂಬತ್ತು ದಿನಗಳ ಕಾಲ ದೇವಿಯನ್ನು ಆರಾಧಿಸುವುದರಿಂದ ಪ್ರತಿ ಹೆಣ್ಣೂ ಹೆಮ್ಮೆ ಪಡಬೇಕು. ಜಗತ್ತು ಆರಂಭವಾಗಿದ್ದೆ ಒಂದು ಶಕ್ತಿಯಿಂದ. ಆ ಶಕ್ತಿಯ ವೈಭವವನ್ನು ಈಗ ನೋಡಬಹುದು. ಹಬ್ಬದ ವೇಳೆ ನನ್ನ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಕಾಣುತ್ತಿದೆ. ಹಲವರು ನನ್ನ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ‘ಒಳ್ಳೆಯ ಕೆಲಸ, ಮನಃಶಾಂತಿ, ಆರೋಗ್ಯ ಹಾಗೂ ಕುಟುಂಬದಲ್ಲಿ ನೆಮ್ಮದಿ ನೆಲೆಸಿರಲಿ’ ಎಂಬುದೇ ದೇವಿಯಲ್ಲಿ ನನ್ನ ಪ್ರಾರ್ಥನೆ’ ಎಂದು ಹೇಳಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net