TEJU BELAVADI: ಇಂದಿನ ಪೀಳಿಗೆ ಹೆಚ್ಚು ಸಾಹಿತ್ಯ ಓದಲಿ

ತೇಜು ಬೆಳವಾಡಿ
ತೇಜು ಬೆಳವಾಡಿ
Published on

ಪ್ರಮುಖ ಮುಖ್ಯಾಂಶಗಳು

  • ನೀನಾಸಂ ಸೇರಿದ ಬಳಿಕ ನನ್ನಲ್ಲಿ ಕನ್ನಡ ಪ್ರಜ್ಞೆ ಹೆಚ್ಚಾಯಿತು.
  • ಉಚ್ಛಾರ ತಪ್ಪಾದರೆ ರಸಭಂಗ
  • ಸರಳ ಕನ್ನಡ ಮಾತನಾಡಿ, ಪರಭಾಷೆಯವರೂ ಕನ್ನಡ ಕಲಿಯುವಂತೆ ಮಾಡಬೇಕಿದೆ.
teju belavadi: ನಾನು ಚಿಕ್ಕಂದಿನಿಂದಲೂ ಕನ್ನಡ ಮಾತನಾಡುತ್ತಿದ್ದೆ. ಆದರೆ, ಓದಲು, ಬರೆಯುವುದು ಕಲಿತಿದ್ದು ಎಂಟನೇ ತರಗತಿಯಲ್ಲಿ. ಮಾತೃಭಾಷೆಯೇ ಓದಲು, ಬರೆಯಲು ಬರುತ್ತಿಲ್ಲ ಅಂತ ನನ್ನಲ್ಲಿಯೇ ಕೀಳರಿಮೆ ಮೂಡಿಸಿದ್ದೂ ಇದೆ. ಹೀಗಾಗಿಯೇ ಬಹುಬೇಗನೇ ಕನ್ನಡ ಕಲಿತೆ. ಮಹಿಳಾ ಸಮಾಜ ಸ್ಕೂಲ್ ಸೇರಿದಾಗ ಕನ್ನಡ ಓದಲು, ಬರೆಯಲು ಮುಂದಾದೆ. ಅದಕ್ಕಾಗಿ ದಿನಚರಿ ಬರೆಯುತ್ತಿದ್ದೆ. ಇನ್ನು ನೀನಾಸಂ ಸೇರಿದ ಬಳಿಕ ನನ್ನಲ್ಲಿ ಕನ್ನಡ ಪ್ರಜ್ಞೆ ಹೆಚ್ಚಾಯಿತು. ಈಗ ಕನ್ನಡದಿಂದಲೇ ಬದುಕು ಕಟ್ಟಿಕೊಂಡಿದ್ದೇನೆ. ನನ್ನ ಮಗಳಿಗೂ ಕನ್ನಡದಲ್ಲಿಯೇ ಕಥೆ ಹೇಳುತ್ತೇವೆ. ಅವಳು ಕೂಡ ಅಷ್ಟೇ ಆಸಕ್ತಿಯಿಂದ ಕೇಳುತ್ತಾಳೆ. ಇದು ಅವಳ ಮೇಲೆ ಪರಿಣಾಮ ಬೀರಿದ್ದು, ಅವಳು ಕೂಡ ತನ್ನ ಸ್ನೇಹಿತರ ಜತೆಗೆ ಕನ್ನಡದಲ್ಲಿಯೇ ಮಾತನಾಡುತ್ತಾಳೆ.
ನಾಟಕ, ಸಿನಿಮಾ ಯಾವುದೇ ಮಾಧ್ಯಮವಾಗಲಿ ಅಲ್ಲಿ ಮಾತನಾಡುವಾಗ ಉಚ್ಛಾರ ತಪ್ಪಾದರೆ ರಸಭಂಗವಾಗುತ್ತದೆ. ಹಾಗಾಗಿ, ಕಲಾವಿದರಿಗೆ ಭಾಷಾಜ್ಞಾನ ಅವಶ್ಯ. ರಾಜ್ಯದಲ್ಲಿ ಬೇರೆ ಬೇರೆ ಶೈಲಿಯ ಕನ್ನಡ ಕಾಣಬಹುದು. ನಮ್ಮ ಶೈಲಿಯ ಭಾಷೆಯನ್ನೇ ನಾವು ಹೆಚ್ಚು ಮಾತನಾಡಬೇಕು. ಅದೇ ಭಾಷೆಯ ಜೀವಂತಿಕೆ. ನೀನಾಸಂನಲ್ಲಿ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳು ಅವರದ್ದೇ ಶೈಲಿಯಲ್ಲಿ ಮಾತನಾಡುವಾಗ ಕನ್ನಡ ಭಾಷೆಯ ಸೌಂದರ್ಯ ಎಷ್ಟು ಚೆಂದ ಅನ್ನಿಸುತ್ತಿತ್ತು. ಇಂದಿನ ಯುವ ಪೀಳಿಗೆ ಸಾಹಿತ್ಯದ ಕಡೆ ಗಮನಹರಿಸಬೇಕು. ಮಾಸ್ತಿ ವೆಂಕಟೇಶ ಅಯ್ಯಂಗಾರರ ಸಣ್ಣಕಥೆಗಳು, ಕುವೆಂಪುರವರ ‘ಕಾನೂರು ಹೆಗ್ಗಡತಿ’ ನನ್ನ ಮೇಲೆ ಪ್ರಭಾವ ಬೀರಿದ ಪುಸ್ತಕಗಳು. ಹಾಗೆಯೇ ಜಾನಪದ ಸಾಹಿತ್ಯ ಹೆಚ್ಚು ಬಳಸಬೇಕು. ಹಾಡಬೇಕು. ಅದು ನಮ್ಮ ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗುತ್ತದೆ. ಸರಳ ಕನ್ನಡ ಮಾತನಾಡಿ, ಪರಭಾಷೆಯವರೂ ಕನ್ನಡ ಕಲಿಯುವಂತೆ ಮಾಡಬೇಕಿದೆ.
ತೇಜು ಬೆಳವಾಡಿ, ನಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net