shwetha srivatshava: ಮನೆಯಿಂದಲೇ ಕನ್ನಡ ಆರಂಭವಾಗಲಿ

ನಟಿ ಶ್ವೇತಾ ಶ್ರೀವಾತ್ಸವ್​
ನಟಿ ಶ್ವೇತಾ ಶ್ರೀವಾತ್ಸವ್​
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡಾಭಿಮಾನ ಅಥವಾ ಕಾಳಜಿ ಮನೆಯಿಂದಲೇ ಆರಂಭವಾಗಬೇಕು
  • ನಾವೇನೇ ಸಾಧಿಸಿದ್ದರೂ ಅದರ ಎಲ್ಲ ಶ್ರೇಯಸ್ಸು ಪಾಲಕರಿಗೆ
  • ಭಾಷೆಗಿಂತ ನಾನು ದೊಡ್ಡವಳಲ್ಲ ಎಂಬ ಸಿದ್ಧಾಂತವನ್ನು ಮೊದಲಿನಿಂದಲೂ ಅರಿತಿದ್ದೇನೆ
ಶ್ವೇತಾ ಶ್ರೀವಾತ್ಸವ್, ನಟಿ
ತಾಯಿಯಾಗಿ ಯೋಚಿಸುವುದಾದರೆ ಮುಂದಿನ ಪೀಳಿಗೆಯ ಮಕ್ಕಳಿಗೆ ನಾಡು, ಭಾಷೆ ಹಾಗೂ ಸಂಸ್ಕೃತಿ ಕುರಿತು ಸರಿಯಾಗಿ ತಿಳಿವಳಿಕೆ ಹೇಳುವ ಅಗತ್ಯವಿದೆ. ಹಾಡು, ಸಾಹಿತ್ಯ, ಕಲೆ ಅಥವಾ ಹಬ್ಬಗಳ ಮೂಲಕವಾದರೂ ನಮ್ಮ ಇತಿಹಾಸ, ಸಂಸ್ಕೃತಿಯ ಜ್ಞಾನದ ಅರಿವು ಮೂಡಿಸಬೇಕು. ಕನ್ನಡಾಭಿಮಾನ ಅಥವಾ ಕಾಳಜಿ ಮನೆಯಿಂದಲೇ ಆರಂಭವಾಗಬೇಕು. ಭಾಷೆಯ ಬೇರು ಆಳವಾಗಿದ್ದಾಗಲೇ ಎತ್ತರವಾಗಿ ಬೆಳೆಯಲು ಸಾಧ್ಯ. ಚಿಕ್ಕಂದಿನಲ್ಲಿರುವಾಗ ತಂದೆ-ತಾಯಿ ನಮಗೆ ಸಂಗೀತ, ಸಾಹಿತ್ಯ, ರಂಗಭೂಮಿ ಹೀಗೆ ಅನೇಕ ವಿಚಾರಗಳ ಆಸಕ್ತಿ ಮೂಡಿಸಿದ್ದರು. ನಮ್ಮ ಭಾಷೆಯ ಬೇರುಗಳು ಇಂತಹ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೇ ಅಡಗಿರುವುದು. ಇವತ್ತು ನಾವೇನೇ ಸಾಧಿಸಿದ್ದರೂ ಅದರ ಎಲ್ಲ ಶ್ರೇಯಸ್ಸು ಪಾಲಕರಿಗೆ ಸಲ್ಲಬೇಕು.
20 ವರ್ಷಗಳ ಹಿಂದೆ ಸಿನಿಮಾ ರಂಗಕ್ಕೆ ಕಾಲಿಟ್ಟಾಗ ನಾನು ಕನ್ನಡ ಭಾಷೆಯಲ್ಲಿಯೇ ಇದ್ದು ಸಾಧನೆ ಮಾಡುತ್ತೇನೆ ಎಂದು ನಿರ್ಧರಿಸಿದ್ದೆ. ಆ ವೇಳೆ ಕನ್ನಡದಲ್ಲಿ ಒಂದು ಸಿನಿಮಾ ಯಶಸ್ಸು ಆದರೆ ಸಾಕು ನಟಿಯರು ಬೇರೆ ಭಾಷೆಗಳಿಗೆ ಹೋಗುತ್ತಿದ್ದರು. ಅದನ್ನೇ ಯಶಸ್ಸು ಎಂದು ಭಾವಿಸಿದ್ದರು. ಹೀಗಿರುವಾಗ, ನನಗೆ ಎಷ್ಟೇ ಅವಕಾಶಗಳು ಬಂದರೂ ಎಂದಿಗೂ ಬೇರೆ ಭಾಷೆಗೆ ಹೋಗುವ ನಿರ್ಧಾರ ಮಾಡಲಿಲ್ಲ. ಕನ್ನಡ ಭಾಷೆಯ ಮೇಲಿನ ಅಭಿಮಾನ, ಪ್ರೀತಿಯ ಜತೆಗೆ ಹೆಣ್ಣಾಗಿ ಇದ್ದ ಜವಾಬ್ದಾರಿಗಳೇ ಇದಕ್ಕೆ ಕಾರಣ. ಭಾಷೆಗಿಂತ ನಾನು ದೊಡ್ಡವಳಲ್ಲ ಎಂಬ ಸಿದ್ಧಾಂತವನ್ನು ಮೊದಲಿನಿಂದಲೂ ಅರಿತುಕೊಂಡು ಪಾಲಿಸುತ್ತಿದ್ದೇನೆ. ಇನ್ನು ಮಗಳಿಗೂ ಕನ್ನಡತನ ಕಲಿಸಿದ್ದೇವೆ. ಶುಕ್ರವಾರ ಮಗಳ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಜತೆಗೆ ಕನ್ನಡ ರಾಜ್ಯೋತ್ಸವವನ್ನೂ ಆಚರಿಸಿದರು. ಅದಕ್ಕಾಗಿ ಸ್ನೇಹಿತೆಯರ ಜತೆಗೆ ಕನ್ನಡ ಹಾಡು ಕಲಿತು ಹಾಡಿದಳು. ಇದು ನಮಗೂ ಖುಷಿ. ಇನ್ನು ಯಾವುದೇ ಕ್ಷೇತ್ರದಲ್ಲೂ ನಮ್ಮ ಭಾಷೆಯನ್ನು ಬಿಟ್ಟುಕೊಡಬಾರದು. ನಾವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿಯೇ ಕನ್ನಡ ಬಳಸಿ, ಭಾಷೆಯನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net