ಬೆಂಗಳೂರು : ಸಾಮಾನ್ಯವಾಗಿ ಚಿತ್ರತಂಡಗಳು ಹಾಡು ರಿಲೀಸ್‌ಗೆ ಮುನ್ನ ಪೋಸ್ಟರ್ ಅಥವಾ ಪ್ರೋಮೊ ಬಿಡುಗಡೆ ಮಾಡುವುದು ವಾಡಿಕೆ. ಆದರೆ, ಸುಧೀರ್ ಅತ್ತಾವರ ನಿರ್ದೇಶನದ ‘ಕೊರಗಜ್ಜ’ ಚಿತ್ರವು ವಿಭಿನ್ನ ಹಾದಿ ತುಳಿದಿದೆ. ಪ್ರೇಕ್ಷಕರಿಗೆ ಹಾಡಿನ ಸಾಹಿತ್ಯ ಮೊದಲು ಗೊತ್ತಾಗಬೇಕು ಅಂತ ಚಿತ್ರದ ಎರಡನೇ ಹಾಡಿನ ಸಾಹಿತ್ಯವನ್ನು ಮೊದಲು ರಿಲೀಸ್ ಮಾಡಿದೆ. ‘ಗಾಳಿ ಗಂಧ... ತೀಡಿ ತಂದಾ... ಶಬ್ದವಿರದ ಮಾತು...!’ ಎಂದು ಸಾಗುವ ಹಾಡಿಗೆ ಖುದ್ದು ನಿರ್ದೇಶಕ ಸುಧೀರ್ ಸಾಹಿತ್ಯ ರಚಿಸಿದ್ದು, ಗೋಪಿ ಸುಂದರ್ ಸಂಗೀತ ಸಂಯೋಜಿಸಿದ್ದಾರೆ. ಸುಂದರ ಸಾಹಿತ್ಯ, ಸುಮಧುರ ಸಂಗೀತಕ್ಕೆ ಬಾಲಿವುಡ್‌ನ ಖ್ಯಾತ ಗಾಯಕರಾದ ಶ್ರೇಯಾ ೋಷಾಲ್ ಮತ್ತು ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ಶೀಘ್ರದಲ್ಲೇ ಈ ಹಾಡು ರಿಲೀಸ್ ಆಗಲಿದೆ. ಆರು ಭಾಷೆಗಳಲ್ಲಿ ಮೂಡಿಬರುತ್ತಿರುವ ‘ಕೊರಗಜ್ಜ’ ಸದ್ಯ ರಿಲೀಸ್ ಸಿದ್ಧವಾಗಿದೆ. 3ಡಿ ಪೋಸ್ಟರ್, ‘ಗುಳಿಗಾ ಗುಳಿಗಾ’ ಹಾಡಿನ ಮೂಲಕ ಈಗಾಗಲೇ ಸಿನಿಮಾ ಸದ್ದು ಮಾಡಿದೆ. ಚಿತ್ರದಲ್ಲಿ ಬಾಲಿವುಡ್ ನಟರಾದ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ, ನಟಿಯರಾದ ಶ್ರುತಿ, ಭವ್ಯಾ ಕಲಾ ಬಳಗದಲ್ಲಿದ್ದಾರೆ. ತ್ರಿವಿಕ್ರಮ್ ಸಿನಿಮಾಸ್ ಹಾಗೂ ಸಕ್ಸಸ್ ಫಿಲಂಸ್ ಬ್ಯಾನರಡಿಯಲ್ಲಿ ತ್ರಿವಿಕ್ರಮ್ ಸಪಲ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.