Trailerless Movies- ಹಾಡೇ ಕೈ ಹಿಡಿಯುವ ಗಾಡು!

Trailerless Movies
Trailerless Movies
Published on
Trailerless Movies-
ಸಿನಿಮಾ ಟೀಮ್​ಗಳು ಮುಹೂರ್ತದಲ್ಲಿ ಶೀರ್ಷಿಕೆ, ನಂತರ ನಾಯಕ, ನಾಯಕಿಯ ಮೊದಲ ನೋಟ, ಕ್ರಮೇಣ ಟೀಸರ್​, ಹಾಡುಗಳು ನಂತರ ರಿಲೀಸ್​ಗೂ ಒಂದು ವಾರ ಮುನ್ನ ಟ್ರೇಲರ್​ ಬಿಡುಗಡೆ ಮಾಡುವುದು ಸಾಮಾನ್ಯ. ಕೆಲ ಚಿತ್ರತಂಡಗಳು ಆ್ಯಕ್ಷನ್​ ಟ್ರೇಲರ್​, ವಿಶೇಷ ಪ್ರೋಮೊ ಅಥವಾ ಗ್ಲಿಂಪ್ಸ್​ಗಳನ್ನೂ ರಿಲೀಸ್​ ಮಾಡುತ್ತವೆ. ಹೀಗೆ ಸಿನಿಮಾಗಳ ಅತ್ಯುತ್ತಮ ಫೈಟ್​, ಸಾಂಗ್​ ಬಿಟ್ಸ್​, ಡೈಲಾಗ್​ಗಳನ್ನು ಸೇರಿಸಿ ಟ್ರೇಲರ್​ ಕಟ್​ ಮಾಡುತ್ತಾರೆ. ಹೀಗಾಗಿಯೇ ಟ್ರೇಲರ್​ಗಳನ್ನು ಪ್ರೇಕ್ಷಕರಿಗೆ ಆಮಂತ್ರಣ ಪತ್ರಿಕೆ ಎಂದೂ ಕರೆಯಲಾಗುತ್ತದೆ. ಆದರೆ, ಇತ್ತೀಚೆಗೆ ಕೆಲ ಚಿತ್ರತಂಡಗಳು ಟ್ರೇಲರ್​ ಸಹವಾಸವೇ ಬೇಡ, ನಾವು ಹಾಡುಗಳ ಮೂಲಕವೇ ಜನರನ್ನು ಥಿಯೇಟರ್​ಗೆ ವೆಲ್ಕಮ್​ ಮಾಡುತ್ತೇವೆ ಎನ್ನುತ್ತಿವೆ. ವಿಶೇಷ ಅಂದರೆ, ಟ್ರೇಲರ್​ ಆಮಂತ್ರಣ ನೀಡದೇ, ಯಶಸ್ಸನ್ನೂ ಗಳಿಸಿವೆ. ಇದಕ್ಕೆ "ಕೃಷ್ಣಂ ಪ್ರಣಯ ಸಖಿ' ಮತ್ತು "ಅಯೋಗ್ಯ 2' ಚಿತ್ರಗಳು ಉತ್ತಮ ಉದಾಹರಣೆ. ಹೌದು, ಈ ಬಗ್ಗೆ ವಿಜಯವಾಣಿ ಜತೆ ಮಾತನಾಡುವ "ಅಯೋಗ್ಯ 2' ನಿರ್ದೇಶಕ ಮಹೇಶ್​, ""ಏನಮ್ಮಿ ಏನಮ್ಮಿ' ಸೇರಿ "ಅಯೋಗ್ಯ' ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿದ್ದವು. ಹೀಗಾಗಿ "ಅಯೋಗ್ಯ 2' ಚಿತ್ರದಲ್ಲೂ ನಾವು ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಥಿಯೇಟರ್​ಗೆ ಕರೆತರಬೇಕು, ಟ್ರೇಲರ್​ ಬಿಡುಗಡೆ ಮಾಡುವುದು ಬೇಡ ಅಂತ ನಾಯಕ ಸತೀಶ್​ ನೀನಾಸಂ, ನಿರ್ಮಾಪಕರಾದ ಮುನೇಗೌಡ ಸೇರಿ ಇಡೀ ತಂಡ ನಿರ್ಧರಿಸಿದೆವು. ಅದು ಸಕ್ಸಸ್​ ಕೂಡ ಆಯಿತು. ಇದೀಗ 25 ದಿನಗಳನ್ನು ಪೂರೈಸಿರುವ "ಅಯೋಗ್ಯ 2' ನಾಲ್ಕನೇ ವಾರಕ್ಕೆ 40ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಜೆಟ್​ಗಿಂತ ಒಂದೂವರೆ ಪಟ್ಟು ಹೆಚ್ಚು ಕಲೆಕ್ಷನ್​ ಆಗಿದೆ' ಎಂದು ಮಾಹಿತಿ ನೀಡುತ್ತಾರೆ.

ಗೋಲ್ಡನ್​ ಐಡಿಯಾ

ನಟ ಗಣೇಶ್​ ಮತ್ತು ನಿರ್ದೇಶಕ ಶ್ರೀನಿವಾಸರಾಜು ಕಾಂಬಿನೇಷನ್​ನಲ್ಲಿ ರಿಲೀಸ್​ ಆಗಿದ್ದ "ಕೃಷ್ಣಂ ಪ್ರಣಯ ಸಖಿ' (ಆ. 15, 2024) ಆ ವರ್ಷದ ಅತಿದೊಡ್ಡ ಹಿಟ್​ ಸಿನಿಮಾಗಳಲ್ಲೊಂದು. "ದ್ವಾಪರ' ಹಾಡು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿದ್ದು, ಈಗಲೂ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿದೆ. ಇದೀಗ ಗಣೇಶ್​ ಮತ್ತು ಶ್ರೀನಿವಾಸ್​ ಜೋಡಿ "ಬೃಂದಾ ವಿಹಾರಿ' ಚಿತ್ರದ ಮೂಲಕ ವಾಪಸ್ಸಾಗಿದ್ದು, ಅ. 16ರಂದು ರಿಲೀಸ್​ ಆಗಲಿದೆ. ಈಗಾಗಲೇ ಚಿತ್ರದ "ರಾಧಾ ರಾಧಾ' ಹಾಡು ಹಿಟ್​ ಲಿಸ್ಟ್​ ಸೇರಿದ್ದು, "ಜೀವಾ ಜೀವಾ', "ರಾಮ ರಾಮ ದೇವ' ಸಾಂಗ್​ಗಳೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್​ ಆಗಿವೆ. ಹೀಗಾಗಿಯೇ "ಕೃಷ್ಣಂ ಪ್ರಣಯ ಸಖಿ'ಯಂತೆಯೇ "ಬೃಂದಾ ವಿಹಾರಿ' ಚಿತ್ರಕ್ಕೂ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಥಿಯೇಟರ್​ಗೆ ಕರೆತರುವ ಆಲೋಚನೆ ತಂಡದ್ದು. ಹೀಗಾಗಿಯೇ ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡದಿರಲು ಗಣೇಶ್​ ಮತ್ತು ತಂಡ ನಿರ್ಧರಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಶ್ರೀನಿವಾಸರಾಜು, "ಒಂದು ಚಿತ್ರದ ಅದ್ಭುತ ಅನ್ನಿಸುವ ದೃಶ್ಯಗಳನ್ನು ಸೇರಿಸಿ ಟ್ರೇಲರ್​ ಕಟ್​ ಮಾಡಲಾಗುತ್ತದೆ. ಆದರೆ, ಟ್ರೇಲರ್​ನಲ್ಲೇ ವಾವ್​ ಕಂಟೆಂಟ್​ ತೋರಿಸಿಬಿಟ್ಟರೆ, ಥಿಯೇಟರ್​ನಲ್ಲಿ ಅದೇ ಸನ್ನಿವೇಶಗಳನ್ನು ನೋಡುವ ಪ್ರೇಕ್ಷಕರಿಗೆ ಅದು ವಾವ್​ ಅನ್ನಿಸುವುದಿಲ್ಲ. ಹೀಗಾಗಿ ಸಿನಿಮಾದಲ್ಲಿ ಏನಿರಲಿದೆ ಎಂಬ ಕುತೂಹಲ ಬಿಟ್ಟುಕೊಡದೇ, ಹಾಡುಗಳನ್ನು ಮಾತ್ರ ಜನರಿಗೆ ತೋರಿಸಿದರೆ, ಜನ ಥಿಯೇಟರ್​ಗೆ ಬಂದಾಗ ಪ್ರತಿ ಡೈಲಾಗ್​, ೈಟ್​, ಸನ್ನಿವೇಶವೂ ಹೊಸತನ್ನು ನೋಡುತ್ತಿರುವ ಅನುಭವ ನೀಡುತ್ತದೆ' ಎಂದು ಹೇಳಿಕೊಳ್ಳುತ್ತಾರೆ.

ಬೇರೆ ಚಿತ್ರರಂಗಗಳಲ್ಲೂ ಆಗಿದೆ ಪ್ರಯೋಗ

ಹಾಗಂತ "ಅಯೋಗ್ಯ 2', "ಕೃಷ್ಣಂ ಪ್ರಣಯ ಸಖಿ', "ಬೃಂದಾ ವಿಹಾರಿ' ತಂಡಗಳಷ್ಟೇ ಟ್ರೇಲರ್​ ತೋರಿಸದೇ, ಸಿನಿಮಾ ರಿಲೀಸ್​ ಮಾಡಿವೆ ಅಂತಲ್ಲ. ಈ ಹಿಂದೆಯೂ ಬೇರೆ ಬೇರೆ ಚಿತ್ರರಂಗಗಳಲ್ಲಿ ಈ ಪ್ರಯೋಗಗಳು ನಡೆದಿವೆ. ಹಾಲಿವುಡ್​ನ "ದ ಬಾಯ್​ ಆ್ಯಂಡ್​ ದ ಹೆರೊನ್​', ತೆಲುಗಿನ "ಗೀತ ಗೋವಿಂದಂ', "ಮಹಾನಟಿ', "ಡಿಸ್ಕೋ ರಾಜ' ಸೇರಿ ಕೆಲ ಚಿತ್ರಗಳು ಟ್ರೇಲರ್​ ಇಲ್ಲದೇ ಥಿಯೇಟರ್​ಗೆ ಎಂಟ್ರಿ ಕೊಟ್ಟು ಸದ್ದು ಮಾಡಿದ್ದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net