ನಟನಟಿಯರು, ನಿರ್ದೇಶಕ, ಸಂಗೀತ ನಿರ್ದೇಶಕ, ಗಾಯಕರು, ಛಾಯಾಗ್ರಾಹಕ, ಸಾಹಸ ಮತ್ತು ನೃತ್ಯ ಸಂಯೋಜಕರು ಸೇರಿ ತಂತ್ರಜ್ಞರು ಪರಭಾಷೆಗಳಿಗೆ ಹಾರುವುದು ಸಾಮಾನ್ಯ. ಆದರೆ, ಸಿನಿಮಾ ಸಂಭಾಷಣೆ, ಹಾಡುಗಳನ್ನು ಬರೆಯುವ ಚಿತ್ರ ಸಾಹಿತಿಗಳು ಒಂದೇ ಭಾಷೆಗೆ ಸೀಮಿತವಾಗಿರುತ್ತಾರೆ. ಅವರ ಬರವಣಿಗೆಯನ್ನು ಇನ್ನೊಂದು ಭಾಷೆಯಲ್ಲಿ ಮತ್ತೊಬ್ಬರು ಬರೆದಿರುತ್ತಾರೆ, ಮಗದೊಬ್ಬರು ಹಾಡಿರುತ್ತಾರೆ. ಆದರೆ, "ಕಾಂತಾರ' ಸಿನಿಮಾದ "ಸಿಂಗಾರ ಸಿರಿಯೇ' ಖ್ಯಾತಿಯ 500ಕ್ಕೂ ಅಧಿಕ ಹಾಡುಗಳಿಗೆ ಸಾಹಿತ್ಯ ಬರೆದಿರುವ ಪ್ರಮೋದ್ ಮರವಂತೆ ಇದೀಗ ಆ ಗಡಿ ದಾಟಿದ್ದಾರೆ. ಕನ್ನಡದ ಜತೆಜತೆಗೆ ಹಿಂದಿಯಲ್ಲೂ ಸಿನಿಮಾ ಹಾಡುಗಳನ್ನು ಬರೆಯುತ್ತಿದ್ದಾರೆ. ಇತ್ತಿಚೆಗಷ್ಟೆ ಅವರು ಕನ್ನಡ& ಹಿಂದಿ ಎರಡೂ ಭಾಷೆಗಳಲ್ಲಿ ಸಾಹಿತ್ಯ ಬರೆದಿರುವ "ಸ್ಪಾರ್ಕ್' ಚಿತ್ರದ "ಶಕಲಕ ಬೂಂ ಬೂಂ' ಹಾಡು ರಿಲೀಸ್ ಆಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ. "ಈ ಹಿಂದೆ ಕನ್ನಡದ "ಚೌಕಿದಾರ್' ಚಿತ್ರದ ಹಿಂದಿ ಅವತರಣಿಕೆಗೆ ಒಂದು ಹಾಡು ಬರೆದಿದ್ದೆ. ಆದರೆ, ಅದು ರಿಲೀಸ್ ಆಗಲಿಲ್ಲ. ಬಳಿಕ ಚಂದ್ರಮೌಳಿ ನಿರ್ದೇಶನದ "ಟೈಗರ್ ಸಾರಿ' ಚಿತ್ರದ ಸ್ಪೆಷಲ್ ಸಾಂಗ್ ಕೂಡ ಬರೆದಿದ್ದೆ. ಇದೀಗ ಮಹಂತೇಶ್ ಹಂದ್ರಾಳ್ ನಿರ್ದೇಶಿಸುತ್ತಿರುವ "ಸ್ಪಾರ್ಕ್' ಚಿತ್ರದ "ಶಕಲಕ ಬೂಂ ಬೂಂ' ಸೇರಿ ಮೂರು ಹಾಡುಗಳನ್ನು ಬರೆದಿದ್ದೇನೆ. ಅವರು ಹಿಂದಿ ಗೀತರಚನೆಕಾರರು ಬೇಕಿತ್ತು ಎನ್ನುತ್ತಿದ್ದರು. ನಾನೊಮ್ಮೆ ಪ್ರಯತ್ನಿಸಲೇ? ಎಂದು ಕೇಳಿದೆ. ಒಪ್ಪಿದರು. ನಾನು ಬರೆದ ಹಾಡು ತಂಡದ ಎಲ್ಲರಿಗೂ ಇಷ್ಟವಾಯಿತು. ಕ್ರಮೇಣ ಮೂರು ಹಾಡುಗಳನ್ನೂ ನನಗೇ ಬರೆಯಲು ಅವಕಾಶ ನೀಡಿದರು. ನಾನು ಶಾಲಾ ದಿನಗಳಲ್ಲಿ ಒಂದು ವರ್ಷ ಮಧ್ಯಪ್ರದೇಶದಲ್ಲಿದ್ದೆ. ಜತೆಗೆ ಕನ್ನಡದ ಬಳಿಕ ಹಿಂದಿ ಹಾಡುಗಳನ್ನು, ಗಜಲ್ಗಳನ್ನು ಹೆಚ್ಚು ಕೇಳುವ ಕಾರಣ ಕನ್ನಡದಷ್ಟು ಹಿಡಿತವಿಲ್ಲದಿದ್ದರೂ, ಹಿಂದಿ ಗೊತ್ತು. ಹಾಗಂತ ಹಿಂದಿಯಲ್ಲೇ ಬರೆಯಬೇಕು ಅಂತೇನಲ್ಲ. ನಾಲ್ಕು ಹಿಂದಿ ಹಾಡುಗಳು ಮತ್ತು ಒಂದು ಕನ್ನಡ ಹಾಡು ಬರೆಯುವ ಅವಕಾಶ ಸಿಕ್ಕರೆ, ನಾನು ಕನ್ನಡ ಹಾಡನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ' ಎಂದು ಹೇಳಿಕೊಳ್ಳುತ್ತಾರೆ.