‘ಬೃಂದಾವಿಹಾರಿ’ ಮುಂದಕ್ಕೆ : ಅ.16ಕ್ಕೆ ರಿಲೀಸ್ ಆಗಬೇಕಿದ್ದ ಚಿತ್ರ ನವೆಂಬರ್ 20ಕ್ಕೆ ತೆರೆಗೆ BRUNDAVIHARI

ನಟ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸರಾಜು ಕಾಂಬಿನೇಷನ್‌ನ ‘ಬೃಂದಾವಿಹಾರಿ’ ಚಿತ್ರವು ಅಂದುಕೊಂಡಂತಾಗಿದ್ದರೆ, ಇದೇ ಅ.16ಕ್ಕೆ ರಿಲೀಸ್ ಆಗಬೇಕಿತ್ತು. ಕೊನೆಯ ಕ್ಷಣದಲ್ಲಿ ಚಿತ್ರತಂಡವು ರಿಲೀಸ್ ಡೇಟ್ ಮುಂದೂಡಿದೆ. ಅದರಂತೆ ಅಕ್ಟೋಬರ್ 16ಕ್ಕೆ ಬರಬೇಕಾಗಿದ್ದ ‘ಬೃಂದಾವಿಹಾರಿ’ ಚಿತ್ರವು ನವೆಂಬರ್ 20ಕ್ಕೆ ತೆರೆಗೆ ಬರಲಿದೆ.
brundavihari still
ಬೃಂದಾವಿಹಾರಿ ಚಿತ್ರದ ದೃಶ್ಯ
Published on: 

ಬೆಂಗಳೂರು: ನಟ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸರಾಜು ಕಾಂಬಿನೇಷನ್‌ನ ‘ಬೃಂದಾವಿಹಾರಿ’ ಚಿತ್ರವು ಅಂದುಕೊಂಡಂತಾಗಿದ್ದರೆ, ಇದೇ ಅ.16ಕ್ಕೆ ರಿಲೀಸ್ ಆಗಬೇಕಿತ್ತು. ಅದಕ್ಕಾಗಿ ಚಿತ್ರತಂಡವು ಭರ್ಜರಿ ಪ್ರಚಾರ ನಡೆಸಿ, ಹುಬ್ಬಳ್ಳಿಯಲ್ಲಿ ಶನಿವಾರ ಪ್ರಿ-ರಿಲೀಸ್ ಇವೆಂಟ್ ಕೂಡ ಆಯೋಜಿಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಚಿತ್ರತಂಡವು ರಿಲೀಸ್ ಡೇಟ್ ಮುಂದೂಡಿದೆ. ಅದರಂತೆ ಅಕ್ಟೋಬರ್ 16ಕ್ಕೆ ಬರಬೇಕಾಗಿದ್ದ ‘ಬೃಂದಾವಿಹಾರಿ’ ಚಿತ್ರವು ನವೆಂಬರ್ 20ಕ್ಕೆ ತೆರೆಗೆ ಬರಲಿದೆ. ಆ ಮೂಲಕ ಒಂದು ತಿಂಗಳು ಮುಂದಕ್ಕೆ ಹೋಗಿದೆ. ಕನ್ನಡದ ಈ ಸಿನಿಮಾ ರಿಲೀಸ್ ಆಗಿದ್ದರೆ, ಈ ಬಾರಿಯ ನವರಾತ್ರಿಗೆ ಸಿನಿಮಾ ಜಾತ್ರೆ ನಡೆಯಲಿದೆ ಎನ್ನಲಾಗಿತ್ತು. ಪರಭಾಷೆಯಲ್ಲಿ ರಜಿನಿಕಾಂತ್ ಅಭಿನಯದ ‘ಜೈಲರ್ 2’ ಮತ್ತು ತೆಲುಗಿನ ‘ರಣಬಾಲಿ’ ತೆರೆಗೆ ಬರುತ್ತಿರುವುದರಿಂದ ಸಿನಿಮಾ ಕಳೆ ಹೆಚ್ಚುತ್ತಿವುದಿತ್ತು. ಆದರೆ, ‘ಬೃಂದಾವಿಹಾರಿ’ ಚಿತ್ರವು ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದೆ. ಅದಕ್ಕೆ ಕೂಡ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ‘ಸದ್ಯ ಕನ್ನಡದ ‘ಪ್ರೇಮದ ಊರಲಿ’ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಅದಕ್ಕೆ ಅನುಕೂಲ ಮಾಡಿಕೊಡಲು ಮುಂದೂಡಲಾಗಿದೆ’ ಎಂದು ಚಿತ್ರತಂಡ ಹೇಳಿಕೊಂಡಿದೆ. ಗಣೇಶ್ ಜತೆಗೆ ದೇವಿಕಾ, ಮಾಳಾವಿಕಾ ಶರ್ಮಾ ಜೋಡಿಯಾಗಿದ್ದಾರೆ. ಮಲಯಾಳಂನ ‘ಹೃದಯಂ’ ಖ್ಯಾತಿಯ ಹೇಷಮ್ ಅಬ್ದುಲ್ ವಹಾಬ್ ಸಂಗೀತ, ವೆಂಕಟ್‌ಪ್ರಸಾದ್ ಛಾಯಾಗ್ರಹಣ ಚಿತ್ರಕ್ಕಿದೆ. ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಹೊಸಬರ ‘ಪ್ರೇಮದ ಊರಲಿ’ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಾನೇ ಸಿನಿಮಾವನ್ನೇ ನೋಡಿ ತಂಡದ ಪ್ರಯತ್ನಕ್ಕೆ ಬೆನ್ನುತಟ್ಟಿದ್ದೆ. ಇದೀಗ ಮೂರನೇ ವಾರಕ್ಕೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಬ್ಬದ ಸಮಯದಲ್ಲಿ ‘ಪ್ರೇಮದ ಊರಲಿ’ ಇನ್ನಷ್ಟು ಪ್ರದರ್ಶನಗೊಂಡು ಹೆಚ್ಚು ಗಳಿಕೆ ಮಾಡಲಿ ಎಂದು ಆಶಿಸುತ್ತೇನೆ. ಆ ಕಾರಣಕ್ಕಾಗಿ ನಮ್ಮ ‘ಬೃಂದಾವಿಹಾರಿ’ ಸಿನಿಮಾವನ್ನು ಮುಂದೂಡಿ, ನ. 20ಕ್ಕೆ ರಿಲೀಸ್ ಮಾಡಲು ತೀರ್ಮಾನಿಸಿದ್ದೇವೆ.
ಗಣೇಶ್, ನಟ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net