ಬಾಲಿವುಡ್ ಅಂಗಳದಲ್ಲಿ ಸುಶ್ಮಿತಾ ಭಟ್ : ಕನ್ನಡದಲ್ಲಿ ಅಂಬೆಗಾಲಿಡುವ ಮುನ್ನವೇ ಹಿಂದಿಗೆ ಹಾರಿದ ಚಂದನವನದ ತಾರೆ

ಸುಶ್ಮಿತಾ ಭಟ್
ಸುಶ್ಮಿತಾ ಭಟ್
Published on

ಪ್ರಮುಖ ಮುಖ್ಯಾಂಶಗಳು

  • ಕೃಷ್ಣಾವತಾರಂ ಭಾಗ 1 ಚಿತ್ರದಿಂದ ಹಿಂದಿ ಚಿತ್ರರಂಗದತ್ತ ಸ್ಯಾಂಡಲ್ ವುಡ್ ನಟಿ
  • ಪೌರಾಣಿಕ ರಾಧಾ ಪಾತ್ರದಲ್ಲಿ ಮಿಂಚಲಿದ್ದಾರೆ ಕಲ್ಜಿಗ ತಾರೆ
  • ಕನ್ನಡದಲ್ಲಿ ಅವಕಾಶ ಸಿಗದ ಬಗ್ಗೆ ಬೇಸರಿಸಿದ ನಟಿ
ಬೆಂಗಳೂರು : ಕನ್ನಡ ಮೂಲದ ನಟಿಯರು ಹಿಂದಿ ಚಿತ್ರರಂಗದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಈಗಾಗಲೇ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಪ್ರಿಯಾಮಣಿ, ಶ್ರೀಲೀಲಾ ಸೇರಿ ಹಲವರು ಗಮನಸೆಳೆದಿದ್ದಾರೆ. ಇದೀಗ ಮತ್ತೊಬ್ಬ ನಟಿ ಸುಶ್ಮಿತಾ ಭಟ್ (sushmith bhat) ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಕನ್ನಡದ ‘ಕಾವ್ಯಾಂಜಲಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದ ಅವರು ಬಳಿಕ ‘ಚೌ ಚೌ ಬಾತ್’, ‘ಕಲ್ಜಿಗ’ ಚಿತ್ರಗಳಲ್ಲಿ ನಟಿಸಿದ್ದರು. ಚಂದನವನದಲ್ಲಿ ಅಂಬೆಗಾಲಿಡುವ ಮುನ್ನವೇ ಅವರು ಮಾಲಿವುಡ್‌, ಟಾಲಿವುಡ್, ಕಾಲಿವುಡ್‌ನಲ್ಲಿ ನಟಿಸಿ ಸೈ ಎನಿಸಿಕೊಂಡರು. ಇಂತಹ ಅಪರೂಪದ ಪ್ರತಿಭೆ ಇದೀಗ ಬಾಲಿವುಡ್‌ನಲ್ಲಿ ಮಿಂಚಲು ಸಿದ್ಧರಾಗುತ್ತಿದ್ದಾರೆ. ಹಾರ್ದಿಕ್ ಗಜ್ಜಾರ್ ನಿರ್ದೇಶನದ ‘ಕೃಷ್ಣಾವತಾರಂ ಭಾಗ 1: ಹೃದಯಂ’ ಚಿತ್ರದಲ್ಲಿ ಸುಶ್ಮಿತಾ ‘ರಾಧಾ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ 7ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಬಾಲಿವುಡ್ ಪ್ರವೇಶಿದ ಬಗ್ಗೆ, ‘ಎರಡು ವರ್ಷಗಳ ಹಿಂದೆ ಈ ಚಿತ್ರತಂಡವೇ ನನ್ನನ್ನು ಸಂಪರ್ಕಿಸಿತು. ಲುಕ್ ಟೆಸ್ಟ್ ನಡೆಸಿ, ಚಿತ್ರತಂಡಕ್ಕೆ ಆಯ್ಕೆ ಮಾಡಿಕೊಂಡರು. ಇಲ್ಲಿ ನನ್ನದು ರಾಧಾ ಪಾತ್ರ. ನಾವು ಈಗಾಗಲೇ ಕೇಳಿರುವ, ತಿಳಿದಿರುವ ಪೌರಾಣಿಕ ಘಟನೆಗಳನ್ನೇ ತೆಗೆದುಕೊಂಡು ರಾಧಾ ಮತ್ತು ಕೃಷ್ಣನ ನಡುವಿನ ಪ್ರೀತಿ, ಪ್ರೇಮವನ್ನು ತೋರಿಸಲಾಗಿದೆ. ಈ ಹಿಂದೆ ರಾಧಾ ಪಾತ್ರದ ಬಗ್ಗೆ ಊಹಿಸಿಕೊಂಡಿದ್ದೆ. ಆದರೆ, ಇದೀಗ ಅದನ್ನು ಪಾತ್ರದ ಮೂಲಕ ಅನುಭವಿಸಿದ್ದೇನೆ. ಇಡೀ ಪಾತ್ರ ನನ್ನನ್ನು ದೈವತ್ವಕ್ಕೆ ಕರೆದುಕೊಂಡು ಹೋಗಿತ್ತು. ದಕ್ಷಿಣ ಭಾರತದವಳಾದ ಕಾರಣ ನನಗೆ ಹಿಂದಿ ಅಷ್ಟಕಷ್ಟೇ. ಅದಕ್ಕಾಗಿ ಹಿಂದಿ ಟೀಚರ್ ನೇಮಿಸಿ, ಭಾಷೆ ಹೇಳಿಕೊಡಲಾಯಿತು. ಬಳಿಕ ಒಂದು ತಿಂಗಳು ಪಾತ್ರಕ್ಕಾಗಿ ವರ್ಕ್‌ಶಾಪ್ ನಡೆಸಿದವು. ರಾಧಾ ಹೇಗೆ ಲವಲವಿಕೆಯಿಂದ ಇರುತ್ತಾಳೆ. ಹಾಗೆಯೇ ಇರುವಂತೆ ಪ್ರಾಕ್ಟೀಸ್ ಮಾಡಿದೆವು. ಕೃಷ್ಣ ಪಾತ್ರಧಾರಿ ಸಿದ್ಧಾರ್ಥ್ ಗುಪ್ತ, ನಟಿ ಸಂಸ್ಕೃತಿ, ನನ್ನನ್ನು ಸೇರಿ ಬಹುತೇಕ ಕಲಾವಿದರು ಹೊಸಬರು. ಎಲ್ಲರೂ ಸೌಹಾರ್ದವಾಗಿಯೇ ನಟಿಸಿದೆವು. ಇನ್ನು ಈ ಚಿತ್ರದಲ್ಲಿ ಕನ್ನಡದ ನಟ ಜಯರಾಮ್ ಕಾರ್ತಿಕ್ (ಜೆಕೆ) ಕೂಡ ಇರುವುದು ಕನ್ನಡಿಗರ ಖುಷಿಯ ವಿಚಾರ’ ಎನ್ನುತ್ತಾರೆ ಸುಶ್ಮಿತಾ ಭಟ್.

ಕಲಾವಿದರಿಗೆ ಗಡಿ ಇಲ್ಲ

ಕಲಾವಿದರ ಹುಡುಕಾಟದಲ್ಲಿ ಬಾಲಿವುಡ್‌ನವರು ಗಡಿ ಮೀರಿದ್ದಾರೆ. ಹಾಗಾಗಿ, ದಕ್ಷಿಣದವರಿಗೆ ಅವಕಾಶಗಳು ಸಿಗುತ್ತಿವೆ ಎನ್ನುವ ಸುಶ್ಮಿತಾ, ‘ಕಲಾವಿದರಿಗೆ ಯಾವುದೇ ಗಡಿ ಇಲ್ಲ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಕಲಾವಿದರ ವಿನಿಮಯ ಸಾಮಾನ್ಯವಾಗಿದೆ. ಇನ್ನು ಪೌರಾಣಿಕ ಸಿನಿಮಾಗಳು ಎಂದರೆ, ಬಾಲಿವುಡ್‌ನವರು ಹೆಚ್ಚು ದಕ್ಷಿಣ ಕಲಾವಿದರಿಗೆ ಆದ್ಯತೆ ನೀಡುತ್ತಾರೆ’ ಎಂಬುದು ನಟಿಯ ಅನಿಸಿಕೆ. ಸದ್ಯ ಸುಶ್ಮಿತಾ ಕನ್ನಡದ ‘ಕರಾವಳಿ’ ಶೂಟಿಂಗ್ ಪೂರ್ಣಗೊಳಿಸಿದ್ದು, ತೆಲುಗು ಚಿತ್ರದ ಮಾತುಕತೆಯಲ್ಲಿದ್ದಾರೆ. ಪರಭಾಷೆಯಲ್ಲಿ ಮಿಂಚುತ್ತಿದ್ದರೂ, ಕನ್ನಡದಲ್ಲಿ ಅವಕಾಶಗಳು ಹೆಚ್ಚುತ್ತಿಲ್ಲ ಎಂದು ನಟಿ ಬೇಸರಿಸುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net