Actress Raadya - "ದ ರೆಡ್​ ಬ್ಯಾಗ್​' ಮೂಲಕ ತೆಲುಗಿಗೆ ಡೆಬ್ಯೂ ಮಾಡಿದ ರೆಬೆಲ್​ ರಾಧ್ಯ

Actress Raadya
Actress Raadya
Published on
Actress Raadya -
"ನಮ್ಮ ಹುಡುಗರು', "ರಾನಿ', "ದೇಸಾಯಿ' ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಹುಡುಗಿ ರಾಧ್ಯ ಇದೀಗ ತೆಲುಗಿಗೆ ಪದಾರ್ಪಣೆ ಮಾಡಿದ್ದಾರೆ. ಹೆಸರು "ದ ರೆಡ್​ ಬ್ಯಾಗ್​'. ಇದೊಂದು ಮಹಿಳಾ ಪ್ರಧಾನ ಆ್ಯಕ್ಷನ್​ ಥ್ರಿಲ್ಲರ್​ "ಪಿಂಕಿ' ಖ್ಯಾತಿಯ ರವಿ ಕುಮಾರ್​ ಸೀರಪು ನಿರ್ದೇಶಿಸಿದ್ದಾರೆ. ಸಿನಿಮಾ ಇದೇ 21ರಂದು ತೆರೆಗೆ ಬರಲಿದ್ದು, "ಸಂಭಾಷಣೆಕಾರ ಮಾಸ್ತಿ ಸರ್​ ತೆಲುಗು ತಂಡಕ್ಕೆ ನನ್ನನ್ನು ಪರಿಚಯಿಸಿದರು. ಮಹಿಳಾ ಪ್ರಧಾನ ಚಿತ್ರ, ರಾ ಪಾತ್ರವಾದ ಕಾರಣ ನನಗೂ ಚಾಲೆಂಜಿಂಗ್​ ಅಂತನ್ನಿಸಿ ಒಪ್ಪಿಕೊಂಡೆ. ಹೆಣ್ಣುಮಕ್ಕಳು ಯಾವ ಕ್ಷೇತ್ರದಲ್ಲಿ, ಯಾವುದೇ ಕೆಲಸಕ್ಕೆ ಹೋಗಲಿ, ಜಡ್ಜ್​ ಮಾಡುತ್ತಾರೆ. ಆದರೆ, ಎಲ್ಲರದೂ ಒಂದೊಂದು ಕಥೆಯಿರುತ್ತದೆ ಅಂತ ಯೋಚಿಸುವುದಿಲ್ಲ. ಈಗಿನ ಸಂದರ್ಭದಲ್ಲಿ ಕೆಲ ಹೆಣ್ಣುಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಸುತ್ತ ಸಾಗುವ ಕಥೆಯಿದು. ನನಗೆ ಪಾರ್ಮೆನ್ಸ್​ಗೆ ತುಂಬ ಪ್ರಾಮುಖ್ಯವಿದೆ' ಎಂದು ಮಾಹಿತಿ ನೀಡುತ್ತಾರೆ ರಾಧ್ಯ.

ಆ್ಯಕ್ಟಿಂಗ್​ ಜತೆ ಆ್ಯಕ್ಷನ್​ ಅಬ್ಬರ

ರಾಧ್ಯ ಈ ಚಿತ್ರದಲ್ಲಿ ಫೈಟ್​ ಕೂಡ ಮಾಡಿದ್ದಾರಂತೆ. "ಚಿತ್ರದಲ್ಲಿ ಮೂರು ಫೈಟ್​ಗಳಿವೆ. "ಪುಷ್ಪ' ಸರಣಿ ಸೇರಿ ಹಲವು ಸಿನಿಮಾಗಳ ಸಾಹಸ ನಿರ್ದೇಶಕ ಡ್ರ್ಯಾಗನ್​ ಪ್ರಕಾಶ್​ ಬಳಿ ಕೆಲ ದಿನಗಳ ಕಾಲ ಸ್ಟಂಟ್​ ತರಬೇತಿ ಪಡೆದೆ. ಬೈಕ್​ ಓಡಿಸುವುದನ್ನು ಕಲಿತೆ. ಕರ್ನೂಲ್​ ಮತ್ತು ರಾಮೋಜಿ ಫಿಲಂ ಸಿಟಿಯ ಬಿಸಿಲಿನಲ್ಲಿ ಫೈಟ್ಸ್​ ಶೂಟ್​ ಮಾಡುವುದು ತುಂಬ ಕಷ್ಟವಿತ್ತು. ಹಾಗೇ ಮಳೆಯಲ್ಲಿ ಉಲ್ಟಾ ನೇತಾಡಬೇಕಿತ್ತು. ಹಾಗೆ ನಟಿಸುವುದು ಸ್ವಲ್ಪ ಸವಾಲಾಗಿತ್ತು. ಈ ಚಿತ್ರಕ್ಕೆ ಆಯ್ಕೆಯಾದ ಬಳಿಕ ತೆಲುಗು ಕಲಿತಿದ್ದೇನೆ. ಆದರೆ, ಸದ್ಯಕ್ಕೆ ಡಬ್​ ಮಾಡಿಲ್ಲವಷ್ಟೇ. ಮುಂದಿನ ದಿನಗಳಲ್ಲಿ ನಾನೇ ಡಬ್​ ಮಾಡಬೇಕು ಅಂತ ಅಂದುಕೊಂಡಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ ರಾಧ್ಯ.

ಖುಷಿ ಮತ್ತು ಬೇಸರ

ತೆಲುಗು ಜತೆಗೆ ಕನ್ನಡದಲ್ಲೂ ನಟಿಸುತ್ತಿರುವ ರಾಧ್ಯ, ಸದ್ಯ ಇನ್ನೂ ಹೆಸರಿಡದ "ಕಾಂಗರೂ' ಖ್ಯಾತಿಯ ಕಿಶೋರ್​ ನಿರ್ದೇಶಿಸುತ್ತಿರುವ, ರೂಪೇಶ್​ ಶೆಟ್ಟಿ ನಾಯಕನಾಗಿರುವ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. "ಇನ್ನೊಂದು ಸಿನಿಮಾ ಇದೇ ತಿಂಗಳು ಘೋಷಣೆಯಾಗಲಿದೆ. ತೆಲುಗಿನಲ್ಲೂ ಮತ್ತೊಂದು ಸಿನಿಮಾ ಒಪ್ಪಿದ್ದೇನೆ, ಅದರ ಅನೌನ್ಸ್​ಮೆಂಟ್​ ಕೂಡ ಆಗಬೇಕಿದೆ. ಹಾಗೇ ಮಲಯಾಳಂನಲ್ಲೂ ಒಂದು ಚಿತ್ರದ ಮಾತುಕತೆ ನಡೆಯುತ್ತಿದೆ. ವೆಬ್​ಸರಣಿಗಳಲ್ಲೂ ಅವಕಾಶ ಬಂದಿದೆ. ಆದರೆ, ನಾನು ಸದ್ಯ ಸಿನಿಮಾ ಮೇಲಷ್ಟೇ ಗಮನ ಹರಿಸಿದ್ದೇನೆ. ಕನ್ನಡಕ್ಕಿಂತ ತೆಲುಗಿನಲ್ಲಿ ಹೆಚ್ಚು ಆಫರ್ಸ್​ ಬರುತ್ತಿವೆ. ಅಲ್ಲಿ ನನ್ನನ್ನು ಒಪ್ಪಿಕೊಂಡು ಸಪೋರ್ಟ್​ ಮಾಡುತ್ತಿರುವ ಖುಷಿಯೇನೋ ಇದೆ. ಆದರೆ, ನಮ್ಮವರು ಯಾಕೆ ಗುರುತಿಸುತ್ತಿಲ್ಲ ಅನ್ನೋ ಬೇಸರವೂ ಇದೆ' ಎನ್ನುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net