ಸೂಪರ್‌ಕಾಪ್ ಪಾವನಾ : ‘ಡಿಯರ್ ಹಸ್ಬೆಂಡ್’ ಚಿತ್ರದಲ್ಲಿ ಐಪಿಎಸ್ ಅಧಿಕಾರಿಯಾದ ನಟಿ

ಪಾವನಾ ಗೌಡ
ಪಾವನಾ ಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಜಟ್ಟ, ಆಟಗಾರ, ಕನ್ನಡಿಗ ಹಾಗೂ ಅಜ್ಞಾತವಾಸಿ ಮೂಲಕ ಗಮನಸೆಳೆದಿರುವ ನಟಿ
  • ಗ್ಲಾಮರ್, ಡಿ-ಗ್ಲಾಮರ್ ಪಾತ್ರಗಳಲ್ಲಿ ಮಿಂಚಿರುವ ಪಾವನ ಗೌಡ
  • ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿರುವ ನಟಿ
  • ದೈಹಿಕವಾಗಿ ಬಲಗೊಳ್ಳಲು ಪಾತ್ರಕ್ಕಾಗಿ ಸಿದ್ಧತೆ ನಡೆಸಿರುವ ನಟಿ

ಬೆಂಗಳೂರು: ಕನ್ನಡದ ‘ಗೊಂಬೆಗಳ ಲವ್’, ‘ಜಟ್ಟ’, ‘ಕನ್ನಡಿಗ’ ‘ಅಜ್ಞಾತವಾಸಿ’ ಸೇರಿ 15ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಖ್ಯಾತಿ ನಟಿ ಪಾವನಾ ಗೌಡಗೆ ಸಲ್ಲುತ್ತದೆ. ಚಿತ್ರದಿಂದ ಚಿತ್ರಕ್ಕೆ ಭಿನ್ನ-ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ಗ್ಲಾಮರ್ ಹಾಗೂ ಡಿ-ಗ್ಲಾಮರ್ ಪಾತ್ರಗಳಲ್ಲಿ ಮಿಂಚಿದ್ದಾರೆ. ಅಂತಹ ಅಪರೂಪದ ಪ್ರತಿಭೆ ಪಾವನಾ ಇದೀಗ ಗುರುರಾಜ್ ಕುಲಕರ್ಣಿ (ನಾಡಗೌಡ) ನಿರ್ದೇಶನದ ‘ಡಿಯರ್ ಹಸ್ಬೆಂಡ್’ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಖಡಕ್ ಐಪಿಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರ ಹಾಗೂ ಸವಾಲುಗಳ ಬಗ್ಗೆ ನಟಿ ‘ವಿಜಯವಾಣಿ’ ಜತೆ ಹಂಚಿಕೊಂಡರು. ‘ಈ ಹಿಂದೆ ‘ಸದ್ದು: ವಿಚಾರಣೆ ನಡೆಯುತ್ತಿದೆ’ ಚಿತ್ರದಲ್ಲಿ ಕಾನ್‌ಸ್ಟೇಬಲ್ ಪಾತ್ರ ನಿರ್ವಹಿಸಿದ್ದೆಯಾದರೂ, ಅದು ಕೇವಲ ಟ್ರೈನಿಂಗ್‌ಗೆ ಮಾತ್ರ ಸೀಮಿತವಾಗಿತ್ತು. ಆದರೆ, ‘ಡಿಯರ್ ಹಸ್ಬೆಂಡ್’ನ ಪೊಲೀಸ್ ಪಾತ್ರ ವಿಸ್ತಾರವಾಗಿದೆ. ಶಾಂಭವಿ ಎಂಬ ಉತ್ತರ ಕರ್ನಾಟಕ ಮೂಲದ ಖಡಕ್ ಐಪಿಎಸ್ ಅಧಿಕಾರಿಯ ಪಾತ್ರದಲ್ಲಿದ್ದೇನೆ. ಸಾಹಸ ದೃಶ್ಯಗಳು ಹೆಚ್ಚಿರುವ ಕಾರಣ ದೈಹಿಕವಾಗಿ ತುಂಬಾ ಸ್ಟ್ರಾಂಗ್ ಆಗಬೇಕಿದೆ. ಅದಕ್ಕಾಗಿ ಈಗಾಗಲೇ ದೈಹಿಕ ಕಸರತ್ತು ನಡೆಸುವ ಜತೆಗೆ ೈಟ್ ತರಬೇತಿ ಪಡೆಯುತ್ತಿದ್ದೇನೆ. ಪೂರ್ಣವಾಗಿ ತಯಾರಿಗೊಂಡು ಸೆಟ್‌ಗೆ ತೆರಳಿದಾಗಲೇ ದೃಶ್ಯ ಚೆನ್ನಾಗಿ ಬರುತ್ತದೆ ಎಂಬುದು ನನ್ನ ನಂಬಿಕೆ. ಇನ್ನು ಮಾನಸಿಕವಾಗಿಯೂ ನಾನು ಪೊಲೀಸ್ ಅಧಿಕಾರಿಯಾಗಬೇಕಿದೆ. ಅದಕ್ಕಾಗಿ ಸಾಕಷ್ಟು ಕ್ರೈಂ-ಥ್ರಿಲ್ಲರ್, ತನಿಖೆ ಹಾದಿಯ ವೆಬ್ ಸರಣಿಗಳನ್ನು ವೀಕ್ಷಿಸುತ್ತಿದ್ದೇನೆ. ವಿಜಯನಗರದ ನಮ್ಮ ಮನೆಯ ಪಕ್ಕದಲ್ಲಿಯೇ ಪೊಲೀಸ್ ಸ್ಟೇಷನ್ ಇರುವುದು. ಅಲ್ಲಿನ ಕೆಲ ಅಧಿಕಾರಿಗಳು ಕೂಡ ನನಗೆ ಪರಿಚಯವಿದೆ. ಹಾಗಾಗಿ, ಅವರ ಹಾವ-ಭಾವವನ್ನು ವೀಕ್ಷಿಸುತ್ತಿದ್ದೇನೆ’ ಎನ್ನುತ್ತಾರೆ. ಇನ್ನು ಕೆಲ ದಿನಗಳಲ್ಲಿಯೇ ಪಾವನಾ ತಮ್ಮ ಭಾಗದ ಶೂಟಿಂಗ್ ಆರಂಭಿಸಲಿದ್ದಾರೆ.

ನಟಿಯ ಭರ್ಜರಿ ಫೋರ್

‘ಡಿಯರ್ ಹಸ್ಬೆಂಡ್’ ಜತೆಗೆ ಪಾವನಾ ಗೌಡ ಅಭಿನಯದ ಎರಡು ಸಿನಿಮಾಗಳು ರಿಲೀಸ್‌ಗಿದ್ದು, ಇನ್ನು ಎರಡು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ನಾಲ್ಕು ಸಿನಿಮಾಗಳು ಇದೇ ವರ್ಷ ಬಿಡುಗಡೆಯಾಗಲಿವೆ ಎನ್ನುವ ನಟಿ, ‘ನನ್ನ ಅಭಿನಯದ ‘ರುಧೀರವನ’ ಚಿತ್ರವು ಈಗಾಗಲೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ಇದೀಗ ಥಿಯೇಟರಿಕಲ್ ರಿಲೀಸ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಜತೆಗೆ ಇನ್ನು ಹೆಸರಿಡದ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಅದು ಕೂಡ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದರ ಜತೆಗೆ ಇನ್ನು ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ’ ಎನ್ನುವ ಪಾವನಾ ನಟನೆ ಜತೆಗೆ ಪುಸ್ತಕ ಓದು, ಕವಿತೆ ರಚನೆ ಪ್ರಮುಖ ಹವ್ಯಾಸ ಎಂದು ಹೇಳಿಕೊಳುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net