ಪ್ರಮೋದ್ ಪಂಜು ಮತ್ತು ಅಮೃತಾ ಅಯ್ಯಂಗಾರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಸಿನಿಮಾ "ಹಲ್ಕಾ ಡಾನ್'. "ಟಗರು', "ಸಲಗ' ನಿರ್ಮಾಪಕ ಕೆ.ಪಿ. ಶ್ರೀಕಾಂತ್ ವೀನಸ್ ಎಂಟರ್ಟೇನರ್ಸ್ ಬ್ಯಾನರ್ನಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ಚಲಾ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಕಳೆದ ವರ್ಷ ಅ. 26ರಂದು ಸಿನಿಮಾ ಮುಹೂರ್ತ ನೆರವೇರಿಸಿಕೊಂಡು, ನವೆಂಬರ್ನಲ್ಲಿ ಶೂಟಿಂಗ್ ಪ್ರಾರಂಭಿಸಿದ್ದ ಚಿತ್ರತಂಡ ಬೆಂಗಳೂರು, ಹೈದರಾಬಾದ್ನಲ್ಲಿ ಎರಡು ಹಂತಗಳ ಚಿತ್ರೀಕರಣ ನಡೆಸಿತ್ತು. ಇದೀಗ ಕೆಲ ದಿನಗಳಿಂದ ಮಂಗಳೂರಿನಲ್ಲಿ ಬೀಡು ಬಿಟ್ಟಿರುವ ತಂಡ ಸದ್ಯ ಕೊನೆಯ ಶೆಡ್ಯೂಲ್ ಶೂಟಿಂಗ್ನಲ್ಲಿ ಬಿಜಿಯಾಗಿದೆ. ಅದರ ನಡುವೆಯೇ ಇತ್ತೀಚೆಗಷ್ಟೆ ಕುತ್ತಾರು ಕೊರಗತನಿಯ ಆದಿಸ್ಥಳಕ್ಕೆ ತೆರಳಿ ದೈವದ ದರ್ಶನ ಪಡೆದಿದೆ. ಹಾಗೇ ಕನ್ನಡ, ತೆಲುಗು ಜತೆಗೆ ತುಳು ಭಾಷೆಯಲ್ಲೂ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಬಗ್ಗೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್, "ಮಂಗಳೂರಿನ ಡಾನ್ ಕುರಿತ ಕಥೆಯಿದು. ರೂಪೇಶ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಯಶ್ ಶೆಟ್ಟಿ, ಅರವಿಂದ್ ಬೋಳಾರ್ ಸೇರಿ ಹಲವಾರು ಮಂಗಳೂರಿನ ಕಲಾವಿದರು ನಟಿಸಿದ್ದಾರೆ. ಕರಾವಳಿ ಕೇಂದ್ರಿತ "ಕಾಂತಾರ' ಚಿತ್ರವನ್ನು ತುಳುವಿನಲ್ಲಿ ರಿಲೀಸ್ ಮಾಡಿದ್ದರು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. "ಹಲ್ಕಾ ಡಾನ್' ಕೂಡ ಮಂಗಳೂರು ಕೇಂದ್ರಿತ ಕಥೆಯಾಗಿರುವ ಕಾರಣ ತುಳು ಭಾಷೆಯಲ್ಲಿ ಬಿಡುಗಡೆ ಮಾಡಬಹುದು ಅಂತನ್ನಿಸಿತು' ಎಂದು ಮಾಹಿತಿ ನೀಡುತ್ತಾರೆ. ಇನ್ನು ಆರು ದಿನಗಳ ಕಾಲ ಮಂಗಳೂರಿನಲ್ಲಿ, ಬಳಿಕ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸಿ ಕುಂಬಳಕಾಯಿ ಪಡೆಯುವ ಪ್ಲ್ಯಾನ್ ಚಿತ್ರತಂಡದ್ದು. ಎಲ್ಲವೂ ಅಂದುಕೊಂಡಂತಾದರೆ ಇದೇ ವರ್ಷದಂತ್ಯಕ್ಕೆ ಅಥವಾ ಹೊಸ ವರ್ಷಕ್ಕೆ "ಹಲ್ಕಾ ಡಾನ್' ತೆರೆಗೆ ಬರಲಿದೆ.